ತುಮಕೂರು: ಕಟ್ಟಡ ಕಾರ್ಮಿಕರೆಂದರೆ ಅನಕ್ಷರಸ್ಥರು, ಕಡಿಮೆ ಓದಿದವರು ಎಂದು ಹೇಳುವವರು ಹೆಚ್ಚು. ಆದರೆ ಅದೇ ದಿನಗೂಲಿ ಕಾರ್ಮಿಕರು ತುಮಕೂರು ಜಿಲ್ಲೆಯಲ್ಲಿ ತಮ್ಮದೇ ಸ್ವಂತ ಬ್ಯಾಂಕ್ ಸ್ಥಾಪಿಸಿ ಇದೀಗ ರಾಜ್ಯದ ಗಮನ ಸೆಳೆದಿದ್ದಾರೆ.
ಶಿರಾ ತಾಲೂಕಿನ ಕಟ್ಟಡ ಕಾರ್ಮಿಕರೆಲ್ಲ ಜೊತೆಯಾಗಿ ತಮ್ಮ ಶ್ರೇಯೋಭಿವೃದ್ದಿಗಾಗಿ ಪತ್ತಿನ ಸಹಕಾರಿ ಬ್ಯಾಂಕ್ ಕಟ್ಟಿಕೊಂಡಿದ್ದಾರೆ. ಲಕ್ಷ್ಮೀ ನಗರದಲ್ಲಿ ಇಂದು ಕಟ್ಟಡ ಕಾರ್ಮಿಕರ ಪತ್ತಿನ ಸಹಕಾರಿ ಬ್ಯಾಂಕ್ ಅಧಿಕೃತವಾಗಿ ಕಾರ್ಯಾರಂಭಿಸಿತು.
ಕಟ್ಟಡ ಕಾರ್ಮಿಕರಿಗೆ ಬ್ಯಾಂಕ್ನವರು ಸಾಲ ಕೊಡಲು ಹಿಂದೇಟು ಹಾಕುತ್ತಿದ್ದರು. ಇದನ್ನರಿತ ಸಂಘ ತಾವೇ ಒಂದು ಬ್ಯಾಂಕ್ ತೆರೆದು ಕಾರ್ಮಿಕರಿಗೆ ಸಹಾಯ ಮಾಡಲು ಪಣ ತೊಟ್ಟಿತು. ಇದರ ಫಲವಾಗಿ ಪತ್ತಿನ ಸಹಕಾರಿ ಸೊಸೈಟಿ ತಲೆ ಎತ್ತಿ ನಿಂತಿದೆ.
1 ಸಾವಿರ ಷೇರುದಾರರು: ಈಗಾಗಲೇ ಒಂದು ಸಾವಿರ ಕಟ್ಟಡ ಕಾರ್ಮಿಕರು ಷೇರುದಾರರಾಗಿದ್ದಾರೆ. ಇದರಿಂದ 11 ಲಕ್ಷ ರೂ ಸಂಗ್ರಹವಾಗಿದೆ. ಅದೇ ರೀತಿ ಸುಮಾರು 20 ಲಕ್ಷ ರೂ ಡೆಪಾಸಿಟ್ ಜಮೆಯಾಗಿದೆ. ಕಟ್ಟಡ ಕಾರ್ಮಿಕರಿಗೆ ಮಾತ್ರ ಇತರ ಸೊಸೈಟಿಗಿಂತ ಶೇ.3ರ ಕಡಿಮೆ ಬಡ್ಡಿಗೆ ಸಾಲ ಕೊಡಲು ಆಡಳಿತ ಮಂಡಳಿ ನಿರ್ಧರಿಸಿದೆ. 13 ಜನ ನಿರ್ದೇಶಕರು ಸೇರಿದಂತೆ ಒಟ್ಟು 15 ಜನ ಕಾರ್ಯಕಾರಿಣಿ ಮಂಡಳಿಯಲ್ಲಿರುವವರು ಕಟ್ಟಡ ಕಾರ್ಮಿಕರೇ ಆಗಿದ್ದಾರೆ. ವಾಹನ, ಚಿನ್ನ, ಮನೆ ಕಟ್ಟಲು ಸಾಲ ಕೊಡಲು ಬ್ಯಾಂಕ್ ನಿರ್ಧರಿಸಿದೆ.
22 ವರ್ಷದಿಂದ ಕಟ್ಟಡ ಕಾರ್ಮಿಕರ ಸಂಘ ಅಸ್ತಿತ್ವದಲ್ಲಿದೆ. ಸಂಘ ಅಸ್ತಿತ್ವಕ್ಕೆ ಬಂದಾಗಿನಿಂದಲೂ ತಮ್ಮದೇ ಒಂದು ಬ್ಯಾಂಕ್ ಕಟ್ಟಬೇಕು ಎಂಬ ಹೆಬ್ಬಯಕೆ ಕಾರ್ಮಿಕರಿಗಿತ್ತು. ಇದೀಗ ಹಲವು ವರ್ಷಗಳ ಕನಸು ನನಸಾಗಿದೆ.
ಇದನ್ನೂ ಓದಿ: ಡಿಪೋಗಳಲ್ಲಿ ಡೀಸೆಲ್ ಕೊರತೆಗೆ ಶೀಘ್ರ ಪರಿಹಾರ: ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ