ತುಮಕೂರು: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದೆ. ಅದರಲ್ಲಿಯೂ ನಿನ್ನೆ (ಸೋಮವಾರ) ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಪೊದೆಗಳಲ್ಲಿ ಅವಿತಿದ್ದ ಹಾವುಗಳು ಆಶ್ರಯಕ್ಕಾಗಿ ವಸತಿ ಪ್ರದೇಶಗಳತ್ತ ಹಾಗೂ ರಸ್ತೆ ಬದಿ ನಿಂತಿದ್ದ ವಾಹನಗಳಲ್ಲಿ ಸಹ ಸೇರಿಕೊಳ್ಳುತ್ತಿವೆ.
ಉರಗ ಸಂರಕ್ಷಕರು ನಿನ್ನೆ ರಾತ್ರಿಯಿಂದ ಇಂದು ಮುಂಜಾನೆವರೆಗೆ ವಿವಿಧೆಡೆ ಮನೆಯೊಳಗೆ ಸೇರಿಕೊಂಡಿದ್ದ ಹಾವುಗಳನ್ನು ಹಿಡಿಯುವ ಕೆಲಸದಲ್ಲಿ ನಿರತರಾಗಿದ್ದರು. ವರಂಗಲ್ ವನ್ಯಜೀವಿ ಜಾಗೃತಿ ಸಂಸ್ಥೆ ಯುವಕರು ನಿನ್ನೆ ರಾತ್ರಿ 10 ಗಂಟೆಯಿಂದ ಮಧ್ಯರಾತ್ರಿ 1 ಗಂಟೆವರೆಗೆ 10ಕ್ಕೂ ಹೆಚ್ಚು ಹಾವುಗಳನ್ನು ರಕ್ಷಣೆ ಮಾಡಿದ್ದಾರೆ.
ಮಳೆ ಬರುತ್ತಿದ್ದ ಕಾರಣ ಹಾವುಗಳು ಮನೆಯೊಳಗಡೆ, ಬೈಕ್ಗಳ ಒಳಗೆ ನುಸುಳಿವೆ. ಇದರಿಂದಾಗಿ ಹಾವುಗಳು ಸೇರಿಕೊಂಡ ಮನೆಗಳಲ್ಲಿ ಕುಟುಂಬದವರು ರಾತ್ರಿಯಿಡಿ ನಿದ್ದೆ ಮಾಡದೇ ಉರಗ ರಕ್ಷಕರು ಬರುವವರೆಗೂ ಇಕ್ಕಟ್ಟಿನಲ್ಲಿ ಸಿಲುಕಿದ್ದರು. ಮಳೆಯ ನಡುವೆಯೂ ಉರಗ ತಜ್ಞರು ಮನೆಗಳಿಗೆ ತೆರಳಿ ಹಾವುಗಳನ್ನು ಸೆರೆ ಹಿಡಿದಿದ್ದಾರೆ.
ನಾಗರ ಹಾವು, ಕೆರೆ ಹಾವು, ಕೊಳಕು ಮಂಡಲ ಸೇರಿದಂತೆ ವಿವಿಧ ಜಾತಿಯ ಹಾವುಗಳನ್ನು ಹಿಡಿದಿರುವ ವರಂಗಲ್ ವನ್ಯಜೀವಿ ಸಂಸ್ಥೆಯ ದಿಲೀಪ್ ಕುಮಾರ್ ಅವರ ತಂಡ ಸುರಕ್ಷಿತವಾಗಿ ದೇವರಾಯನದುರ್ಗ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.