ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕಿಗೆ ನೀರಾವರಿ ವಿಷಯದಲ್ಲಿ ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದರು. ಆದ್ರೆ ನಾನು ಅಂತಹ ಕೀಳು ಮಟ್ಟದ ರಾಜಕಾರಣ ಮಾಡುವ ವ್ಯಕ್ತಿಯಲ್ಲ. ಇದನ್ನು ಆರೋಪ ಮಾಡುತ್ತಿದ್ದವರು ಅರಿತುಕೊಳ್ಳಬೇಕು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ವೇದಿಕೆ ಮೇಲೆಯೇ ಕಣ್ಣೀರಿಟ್ಟ ಪ್ರಸಂಗ ನಡೆಯಿತು.
ಹುಳಿಯಾರಿನಲ್ಲಿ ನಡೆದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಲಿಂಗಾಯತರಿಗೆ ಮಾತ್ರ ಮಾಧುಸ್ವಾಮಿ ಸೀಮಿತವಾಗಿದ್ದಾರೆ ಎಂದು ಹೇಳುತ್ತಿದ್ದವರು ಇಂದು ನನ್ನ ಕೆಲಸ ನೋಡಿ ಏನು ಹೇಳುತ್ತಾರೆ? ಎಂದು ಪ್ರಶ್ನಿಸಿದರು.
ತಾಲೂಕಿನಲ್ಲಿ ತಿಮ್ಲಾಪುರ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಮಾತ್ರ ಹಿಂದುಳಿದವರ ಜಮೀನಿದೆ. ಉಳಿದೆಡೆ ಮೇಲ್ವರ್ಗದವರ ಜಮೀನಿದೆ. ಹಾಗಾಗಿ, ಹಿಂದುಳಿದವರಿಗೆ ನೆರವಾಗಲು ತಿಮ್ಲಾಪುರ ಕೆರೆಗೆ ಹೇಮಾವತಿ ನೀರು ಹರಿಸಲು ಹಠ ಮಾಡಿದ್ದೆ.
ರಾಜಕಾರಣದಲ್ಲಿ ಧರ್ಮ, ಜಾತಿ ಬರಬಾರದು. ನಾನೆಂದೂ ಜಾತಿ, ಧರ್ಮದ ಬೇದ ಮಾಡಿಲ್ಲ. ಈ ವರ್ಷ ತಿಮ್ಲಾಪುರ ಕೆರೆ ತುಂಬಿಸಿದ್ದೇನೆ. ಪಾಪಪುಣ್ಯ ಗೊತ್ತಿರುವವರು ನಾನು ಜಾತಿವಾದಿಯೇ ಎಂದು ಯೋಚನೆ ಮಾಡಲಿ ಎಂದು ಸಚಿವ ಮಾಧುಸ್ವಾಮಿ ಭಾವುಕರಾದರು.
ಇದನ್ನೂ ಓದಿ: ಡಿಕೆಶಿಗೆ ಬೆಕ್ಕಿನ ಕನಸಲ್ಲಿ ಇಲಿ ಎಂಬಂತಾಗಿದೆ: ಸಿಎಂ ತಿರುಗೇಟು