ತುಮಕೂರು: ವಿಶ್ವ ಪ್ರಸಿದ್ಧ ಶ್ರೀ ಸಿದ್ಧಗಂಗಾ ಕ್ಷೇತ್ರದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಅತಿ ದೊಡ್ಡ ಜಾನುವಾರು ಜಾತ್ರೆ ಕಳೆದ ಮೂರು ದಿನಗಳಿಂದ ಪ್ರಾರಂಭವಾಗಿದ್ದು, ಸಂಭ್ರಮ ಮನೆ ಮಾಡಿದೆ.
ಸಿದ್ಧಗಂಗಾ ಮಠದ ಆವರಣದಲ್ಲಿ ಜಾನುವಾರು ಜಾತ್ರೆ ನಡೆಯುತ್ತಿದ್ದು, ಈಗಾಗಲೇ ಸಾವಿರಾರು ಜಾನುವಾರುಗಳನ್ನು ರೈತರು ಜಾತ್ರೆಗೆ ತಂದಿದ್ದಾರೆ. ಮಠದಿಂದ ಜಾನುವಾರುಗಳಿಗೆ ಅಗತ್ಯ ಇರುವ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಅಲ್ಲಲ್ಲಿ ಶಾಮಿಯಾನ ಹಾಕಲಾಗಿದೆ. ಜೊತೆಗೆ ಜಾನುವಾರುಗಳಿಗೆ ಮೇವಿನ ಕೊರತೆ ಆಗಬಾರದು ಎಂದು ಮೇವಿನ ಸರಬರಾಜನ್ನು ಮಾಡಲಾಗಿದೆ.
ಈ ಬಾರಿಯೂ ಜಿಲ್ಲೆಯ ಎಲ್ಲ ತಾಲೂಕುಗಳಿಂದ ರೈತರು ಜಾನುವಾರುಗಳನ್ನು ಕರೆ ತಂದಿದ್ದಾರೆ. ತುಮಕೂರು ಮಾತ್ರವಲ್ಲದೇ ರಾಮನಗರ, ಚಿಕ್ಕಬಳ್ಳಾಪುರ, ಹಾಸನ ಭಾಗದಿಂದಲೂ ರೈತರು ಅಮೃತಮಹಲ್, ಹಳ್ಳಿಕಾರ್ ತಳಿಯ ಜಾನುವಾರುಗಳನ್ನು ಮಾರಾಟ ಮಾಡಲು ತಂದಿದ್ದಾರೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹಳ್ಳಿಕಾರ್ ತಳಿಯನ್ನು ರೈತರು ತಂದಿದ್ದು, ಬಿರುಬಿಸಿಲಿನ ನಡುವೆಯೂ ರೈತರು ಜಾನುವಾರುಗಳನ್ನು ಖರೀದಿಸಲು ಹಾಗೂ ಮಾರಾಟ ಮಾಡಲು ಉತ್ಸುಕತೆಯಿಂದ ಜಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
ಇನ್ನು ಉತ್ಕೃಷ್ಟ ಗುಣಮಟ್ಟದ ಹಳ್ಳಿಕಾರ್ ತಳಿಯ ರಾಸುಗಳನ್ನು 4 ಲಕ್ಷದಿಂದ 8 ಲಕ್ಷ ರೂ. ವರೆಗೂ ಜಾತ್ರೆಯಲ್ಲಿ ಮಾರಾಟಕ್ಕೆ ಇಡಲಾಗಿದೆ. ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿರುವ ಜಾನುವಾರು ಜಾತ್ರೆಯಲ್ಲಿ ರಾಸುಗಳನ್ನು ಖರೀದಿಸಲು ನೆರೆಯ ಆಂಧ್ರಪ್ರದೇಶ, ಹಾಸನ, ರಾಮನಗರ ಹಾಗೂ ಉತ್ತರ ಕರ್ನಾಟಕ ಭಾಗದಿಂದ ರೈತರು ಆಗಮಿಸಿದ್ದಾರೆ.