ತುಮಕೂರು: ಮೇಕೆದಾಟು ಪಾದಯಾತ್ರೆ ರಾಜಕೀಯದ ಚಳುವಳಿ ಅಲ್ಲ. ಇದೊಂದು ರಾಜ್ಯ, ದೇಶಕ್ಕೆ ಅನುಕೂಲ ಆಗುವ ಪಾದಯಾತ್ರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ರಾಜ್ಯದ ಜ್ವಲಂತ ಸಮಸ್ಯೆ. ಜಲಾಶಯ ಮಾಡಲು ನಮ್ಮ ಸರ್ಕಾರ ಡಿಪಿಆರ್ ಮಾಡಿತ್ತು. ನಾವು ಮಾಡಿದ್ದ ಡಿಪಿಆರ್ ಒಪ್ಪಿಕೊಂಡು ಅನುಮತಿ ಕೊಟ್ಟಿದ್ದಾರೆ. ಕುಡಿಯುವ ನೀರಿನ ವಿಚಾರದಲ್ಲಿ ಯಾವುದೇ ಎನ್‌ಒಸಿ ಬೇಡ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಅಣೆಕಟ್ಟೆಗೆ 9,500 ಕೋಟಿ ರೂ ಅಂತಿಮವಾಗಿದೆ. ಮೇಕೆದಾಟಿನ ನೀರಿನಿಂದ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು. ಬೆಂಗಳೂರಿಗೆ ಕುಡಿಯುವ ನೀರು ಸಿಗುತ್ತದೆ. ಕಾಮಗಾರಿ ಆರಂಭ ಮಾಡುವಂತೆ ಒತ್ತಾಯಿಸಿ ಪಾದಯಾತ್ರೆ ಆರಂಭಿಸುತ್ತೇವೆ. ಜ.9ರಿಂದ ಮೇಕೆದಾಟಿನಿಂದ ಪಾದಯಾತ್ರೆ ಆರಂಭ ಮಾಡುತ್ತೇವೆ ಎಂದರು.
ಪ್ರತಿ ಜಿಲ್ಲೆ, ತಾಲೂಕಿನಿಂದ ಕಾರ್ಯಕರ್ತರು ಬರುತ್ತಾರೆ. ಪಕ್ಷಾತೀತವಾಗಿ ಎಲ್ಲ ಸಂಘಟನೆಗಳು ಭಾಗವಹಿಸಬಹುದು. ಕನ್ನಡ ಸಂಘಟನೆ, ಚಲನಚಿತ್ರ ಮಂಡಳಿ ಸೇರಿದಂತೆ ಎಲ್ಲರಿಗೂ ಅವಕಾಶ ಇದೆ. ಕಾಂಗ್ರೆಸ್ ಇತಿಹಾಸವೇ ಈ ದೇಶದ ಇತಿಹಾಸ. ಪಾದಯಾತ್ರೆ ರಾಜಕೀಯ ಉದ್ದೇಶದ್ದಲ್ಲ ಎಂದು ತಿಳಿಸಿದರು.
ಮತಾಂತರ ನಿಷೇಧ ಕಾಯ್ದೆ ಅಂಗೀಕಾರದ ದಿನ ಗೈರಾಗಿರುವ ವಿಚಾರವಾಗಿ ಮಾತನಾಡಿದ ಅವರು, ನಿಗದಿತ ಕಾರ್ಯಕ್ರಮಕ್ಕೆ ಹೋಗಿದ್ದರಿಂದ ನಾನು ಗೈರಾಗಿದ್ದೆ. ಅದರ ಹಿಂದೆ ಬೇರೆ ಉದ್ದೇಶ ಇಲ್ಲ. ಸಿಎಲ್ಪಿ ನಾಯಕರೊಂದಿಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದರು.
ಡಿ.31ಕ್ಕೆ ಕರ್ನಾಟಕ ಬಂದ್ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ಬಂದ್ ಯಾವ ದಿನ, ಯಾವ ಟೈಂ ಅನ್ನೋದು ಮುಖ್ಯ. ಘಟನೆಗೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ಈಗಾಗಲೇ ಒಕ್ಕೊರಲಿನ ತೀರ್ಮಾನ ಕೈಗೊಳ್ಳಲಾಗಿದೆ. ಇತ್ತೀಚಿನ ದಿನದಲ್ಲಿ ವ್ಯಾಪಾರ- ವಹಿವಾಟು ಇಲ್ಲದೇ ಜನರ ಬದುಕು ದುಸ್ತರವಾಗಿದೆ. ಈ ಸಂದರ್ಭದಲ್ಲಿ ಬಂದ್ ಮಾಡುವುದು ಸರಿಯೇ?. ನಾನು ಇದರ ಬಗ್ಗೆ ಏನೂ ಹೇಳಲ್ಲ, ಸರ್ಕಾರ ಉತ್ತರ ಕೊಡುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ಸಮುದ್ರದ ಅಲೆಗಳಿಗೆ ಕೊಚ್ಚಿ ದಡ ಸೇರಿದ 27 ಮೃತದೇಹಗಳು!