ತುಮಕೂರು : ಮಧುಗಿರಿಯ ಅಂಧ ಗಾಯಕಿಯರಿಗೆ ಪುಟ್ಟದೊಂದು ಮನೆಕಟ್ಟಿಕೊಟ್ಟು ಮಾನವೀಯತೆ ಮೆರೆದಿದ್ದ ನಟ ಜಗ್ಗೇಶ್ ಅಭಿಮಾನಿಗಳು, ಕನ್ನಡ ರಾಜ್ಯೋತ್ಸವದ ಅಂಗವಾಗಿ ಇದೀಗ ಅಂತಹದೇ ಮತ್ತೊಂದು ಮಾನವೀಯ ಕಾರ್ಯ ಮಾಡಿದ್ದಾರೆ.
ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿರುವ ನಟ ಜಗ್ಗೇಶ್ ಅಭಿಮಾನಿಗಳ ಸಂಘ ಹಾಗೂ ಪ್ರೆಂಡ್ಸ್ ಗ್ರೂಪ್ ಕಳೆದ ಹಲವಾರು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ.
ಜೀ ಕನ್ನಡ ವಾಹಿನಿಯಲ್ಲಿ ತಮ್ಮ ಸುಶ್ರಾವ್ಯ ಹಾಡಿನ ಮೂಲಕ ಕರುನಾಡ ಜನರ ಮನಗೆದ್ದ ಮಧುಗಿರಿಯ ಅಂಧ ಸಹೋದರಿಯರಾದ ರತ್ನಮ್ಮ ಮತ್ತು ಮಂಜಮ್ಮಗೆ ಜಗ್ಗೇಶ್ ಅಭಿಮಾನಿಗಳು ಪುಟ್ಟದೊಂದು ಮನೆಕಟ್ಟಿ ಕೊಟ್ಟು ಗಾಯಕಿಯರ ಸಹಾಯಕ್ಕೆ ನಿಂತಿದ್ದರು. ಅದೇ ರೀತಿ ಇದೀಗ ಮತ್ತೊಂದು ಸಮಾಜ ಸೇವೆ ಮಾಡಿದ್ದಾರೆ.
66ನೇ ಕನ್ನಡ ರಾಜ್ಯೋತ್ಸವದಂದು ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ಮೂಲಕ ರಾಜ್ಯೋತ್ಸವ ಆಚರಿಸಬೇಕೆಂದು ವೃದ್ಧೆಯೋರ್ವರಿಗೆ ಮನೆ ನಿರ್ಮಿಸಿಕೊಟ್ಟಿದ್ದಾರೆ. ಕೊರಟಗೆರೆ ಪಟ್ಟಣದ ಗಿರಿನಗರ ನಿವಾಸಿ ರಂಗಮ್ಮ ಎಂಬ ವೃದ್ಧೆ ಗುಡಿಸಲಿನಲ್ಲಿ ದಯನೀಯ ಸ್ಥಿತಿಯಲ್ಲಿ ವಾಸ ಮಾಡುತ್ತಿದ್ದರು. ಇದನ್ನು ಮನಗಂಡ ಜಗ್ಗೇಶ್ ಅಭಿಮಾನಿಗಳು, ಹಣ ಹೊಂದಿಸಿ ಸ್ವತಃ ತಾವೇ ಶ್ರಮದಾನ ಮಾಡಿ ರಂಗಮ್ಮಗೆ ಸೂರು ಕಲ್ಪಿಸಿ ಕೊಟ್ಟಿದ್ದಾರೆ.
ಕಳೆದ 4 ತಿಂಗಳಿಂದ ಕಾರ್ಯಪ್ರವರ್ತರಾದರು ಕಾರ್ಯಕರ್ತರು, ದಾನಿಗಳಿಂದ ಹಣ ಸಂಗ್ರಹಿಸಿ ಕಡಿಮೆ ಅವಧಿ ಮತ್ತು ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಟ್ಟಿದ್ದಾರೆ. ಫ್ರೆಂಡ್ಸ್ ಗ್ರೂಪ್ ಹಾಗೂ ಜಗ್ಗೇಶ್ ಅಭಿಮಾನಿ ಸಂಘದಲ್ಲಿ ಸುಮಾರು 800ಕ್ಕೂ ಹೆಚ್ಚು ಸದಸ್ಯರಿದ್ದು, ಗಾರೆ ಕೆಲಸ, ಎಲೆಕ್ಟ್ರಿಕ್ ಸೇರಿದಂತೆ ಹೀಗೆ ಎಲ್ಲಾ ಕೆಲಸ ಮಾಡುವ ಸದಸ್ಯರಿದ್ದಾರೆ.
ವೃದ್ಧೆಯ ಮನೆಗೆ ಕನ್ನಡ ಬಾವುಟದ ಹಳದಿ ಹಾಗೂ ಕೆಂಪು ಬಣ್ಣವನ್ನು ಪೇಂಟ್ ಮಾಡಲಾಗಿದೆ. ಜತೆಗೆ ಕನ್ನಡಾಂಬೆಯ ಚಿತ್ರವನ್ನು ಬಿಡಿಸಲಾಗಿದೆ. 15x20 ಸುತ್ತಳತೆಯಲ್ಲಿ ಮನೆ ಕಟ್ಟಿದ್ದಾರೆ. ಒಂದು ಹಾಲ್, ಅಡುಗೆ ಕೋಣೆ, ಅಟ್ಯಾಚ್ ಬಾತ್ ರೂಂ ವ್ಯವಸ್ಥೆ ಮಾಡಿ ಕೊಡಲಾಗಿದೆ. ಜಗ್ಗೇಶ್ ಅಭಿಮಾನಿಗಳ ಈ ಸೇವೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.