ತುಮಕೂರು: ಒಂದೂವರೆ ತಿಂಗಳ ಅವಧಿಯಲ್ಲಿ ಜಿಲ್ಲೆಯ ತಿಪಟೂರು ತಾಲೂಕಿನ ವಿವಿಧೆಡೆ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು ಅಪಾರ ಪ್ರಮಾಣದ ಗಾಂಜಾ ವಶಪಡಿಸಿಕೊಂಡು 10 ಮಂದಿ ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಿಪಟೂರಿನ ಗಾಂಧಿನಗರ ನಿವಾಸಿಗಳಾದ ಮೊಹಮದ್ ಇಮ್ರಾನ್, ಮನ್ಸೂರ್, ಸಾಕ್ಲೈನ್ ಮುಸ್ತಾಕ್, ಖಾಲಿದ್ ಪಾಷಾ, ಸ್ವರೂಪ್, ತಿಪಟೂರಿನ ಆಕ್ಬರ್ ಷರೀಫ್, ಶಿವು, ಹಾಸನ ಜಿಲ್ಲೆಯ ಹಳೇ ಬೀಡಿನ ಮೊಹಮದ್ ಹುಸೇನ್, ಚನ್ನರಾಯಪಟ್ಟಣ ತಾಲೂಕಿನ ಒಳಗೇರಹಳ್ಳಿಯ ಮಂಜೇಗೌಡ, ಸಚಿನ್ ಶರ್ಮ ಬಂಧಿತ ಆರೋಪಿಗಳು.
ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಗ್ರಾಮದ ಗವಿ ರಂಗಯ್ಯ ಎಂಬುವವರ ತೋಟದ ಮೇಲೆ ದಾಳಿ ನಡೆಸಿದ ಪೊಲೀಸರು 2.5 ಕೆ.ಜಿ ಒಣ ಗಾಂಜಾ, 58 ಗಾಂಜಾ ಗಿಡಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಜೊತೆಗೆ ತಿಮ್ಮನಹಳ್ಳಿಯ ಚಂದ್ರರಾವ್ ಎಂಬಾತ ಮಾರಾಟಕ್ಕೆ ಸಂಗ್ರಹಿಸಿಟ್ಟಿದ್ದ ಗಾಂಜಾವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.