ತುಮಕೂರು: ಪಂಚಮಸಾಲಿ ಲಿಂಗಾಯತರಿಗೆ 2ಎ ಮೀಸಲಾತಿಗೆ ಒತ್ತಾಯಿಸಿ ಕಳೆದ 25 ದಿನಗಳಿಂದ ನಡೆಯುತ್ತಿರುವ ಪಂಚಮಸಾಲಿ ಕೂಡಲ ಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದ ಪಾದಯಾತ್ರೆ ಇಂದು ಶಿರಾ ತಾಲೂಕಿನ ತಾವರೆಕೆರೆ ಭಾಗದಲ್ಲಿ ಸಂಚರಿಸಿತು.
ನಿನ್ನೆ ಶಿರಾದ ತಾವರೆಕೆರೆ ಭಕ್ತರೊಬ್ಬರ ಫಾರ್ಮ್ ಹೌಸ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಶ್ರೀಗಳು, ಇಂದು ತಮ್ಮ ಪಾದಯಾತ್ರೆ ಮುಂದುವರೆಸಿದರು. ಶಿರಾದ ಸಿಬಿವರೆಗೂ ಪಾದಯಾತ್ರೆ ನಡೆಸಿ ಸಿಬಿಯಲ್ಲಿ ಇಂದಿನ ಪಾದಯಾತ್ರೆ ಅಂತ್ಯಗೊಳಿಸಿದ್ದಾರೆ.
ಮೀಸಲಾತಿಯೊಂದಿಗೆ ವಾಪಸ್ ಬರುತ್ತೇನೆ ಎಂದು ಮಾತು ನೀಡಿದ್ದೇನೆ
ಪಾದಯಾತ್ರೆ ಕುರಿತು ಪ್ರತಿಕ್ರಿಯೆ ನೀಡಿದ ಜಯಮೃತ್ಯುಂಜಯ ಸ್ವಾಮೀಜಿ, ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ ಮತ್ತೆ ಹೊರ ಹಾಕಿದ್ದಾರೆ. ಹಿಂದುಳಿದ ವರ್ಗಗಳ ಆಯೋಗಕ್ಕೆ ವರದಿ ನೀಡಲು ಸಿಎಂ ಅದೇಶ ನೀಡಿರುವುದು ಸ್ವಾಗತಾರ್ಹ ವಿಚಾರವಾಗಿದ್ದರೂ ನಾನು ಇಂದು ವಕೀಲರ ಬಳಿ ಮಾತನಾಡಿದ್ದು, ಅವರು ವರದಿ ಬರುವುದು ತಡವಾಗುತ್ತದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರಿಂದ ಬೇಸರವಾಗಿದೆ. ಕೂಡಲೇ ಸಿಎಂ ಬೇಗ ವರದಿ ತರಿಸಿಕೊಂಡು ಸಂಪುಟದಲ್ಲಿ ಮೀಸಲಾತಿ ಅಂಗೀಕಾರಗೊಳಿಸಬೇಕು. ನಾನು ಮೀಸಲಾತಿಯೊಂದಿಗೆ ವಾಪಸ್ ಬರುತ್ತೇನೆ ಎಂದು ಮಾತು ನೀಡಿ ಪಾದಯಾತ್ರೆ ಮಾಡುತ್ತಿದ್ದು, ಸರ್ಕಾರ ಆದಷ್ಟು ಬೇಗ ಮೀಸಲಾತಿ ಘೋಷಿಸಬೇಕು ಎಂದರು.
ಸಿಎಂ ಆದಷ್ಟು ಬೇಗ ಬೇಡಿಕೆ ಈಡೇರಿಸಬೇಕು
ಇದೇ ಸಂದರ್ಭದಲ್ಲಿ ಶ್ರೀಗಳ ಪಾದಯಾತ್ರೆ ಕರಿತು ಮಾತನಾಡಿದ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ, ಬೇಡಿಕೆ ಸ್ವಾಗತಾರ್ಹವಾಗಿದೆ. ಸಿಎಂ ಆದಷ್ಟು ಬೇಗ ಬೇಡಿಕೆ ಈಡೇರಿಸಬೇಕು. ಎಂಪಿಗಳ ಮೇಲೆ ಒತ್ತಡ ಹಾಕುವುದು ಸರಿಯಲ್ಲ. ಸಿಎಂ ಶಿಫಾರಸು ಮಾಡಿ ಕೇಂದ್ರಕ್ಕೆ ಸಲ್ಲಿಸಿ ಆದಷ್ಟು ಬೇಗ ಮೀಸಲಾತಿ ಘೋಷಣೆ ಮಾಡಬೇಕು ಎಂದರು.
ಇಂದು ಶ್ರೀಗಳ ಪಾದಯಾತ್ರೆ ಶಿರಾ ತಾಲೂಕಿನ ಸಿಬಿಯಲ್ಲಿ ವಾಸ್ತವ್ಯ ಹೂಡಲಿದ್ದು, ನಾಳೆ ಶಿರಾಗೆ ಪ್ರಯಾಣ ಬೆಳಸಲಿದೆ. ಫೆ. 10ರಂದು ತುಮಕೂರಲ್ಲಿ ಸಮಾಜದ ಎಲ್ಲಾ ಮುಖಂಡರ ಸಭೆ ನಡೆಸಲಿದೆ. ಅಂದು ಬೆಂಗಳೂರಿನ ಸಮಾವೇಶ ದಿನಾಂಕ ನಿಗದಿಗೊಳ್ಳಲಿದ್ದು, ಸಿಎಂಗೆ ಹೋರಾಟ ಮುಂದುವರೆಯುವ ಸ್ಪಷ್ಟ ಸಂದೇಶ ರವಾನೆಯಾಗಿದೆ.