ತುಮಕೂರು: ತುಮಕೂರು ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಯನ್ನು ಮೂರು ಸುತ್ತಿನ ಕೋಟೆಯಂತೆ ಭದ್ರತಾ ವ್ಯವಸ್ಥೆಯಲ್ಲಿ ನಡೆಸಲು ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದೆ ಎಂದು ಚುನಾವಣಾಧಿಕಾರಿ ಕೆ ರಾಕೇಶ್ ಕುಮಾರ್ ಹೇಳಿದರು.
'ಈ ಟಿವಿ ಭಾರತ್' ಜೊತೆಗೆ ಮಾತನಾಡಿದ ಚುನಾವಣಾಧಿಕಾರಿ ಕೆ ರಾಕೇಶ್ ಕುಮಾರ್, ಈವಿಎಂ ಎಣಿಕೆ ಕೊಠಡಿ ಬಳಿ ಮೊದಲ ಸುತ್ತಿನ ಭದ್ರತಾ ವ್ಯವಸ್ಥೆಯಲ್ಲಿ ಬಿಎಸ್ಎಫ್ ಮತ್ತು ಸಿಎಪಿಎಫ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುತ್ತದೆ. ಎರಡು ಮತ್ತು ಮೂರನೇ ಸುತ್ತಿನ ಭದ್ರತಾ ವ್ಯವಸ್ಥೆಯನ್ನು ರಾಜ್ಯ ಪೊಲೀಸರು ಉಸ್ತುವಾರಿ ವಹಿಸುವರು. ಇದಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯೋಜನೆ ರೂಪಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಮತ್ತು ಲೋಕಸಭೆ ಕ್ಷೇತ್ರದ ಚುನಾವಣಾಧಿಕಾರಿ ಕೆ ರಾಕೇಶ್ ಕುಮಾರ್ ತಿಳಿಸಿದ್ದಾರೆ.
ಬಿಎಸ್ಎಫ್ ಡಿ ಐ ಜಿ ನಗರದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಅದೇ ರೀತಿ ಆರು ಕೆಎಸ್ಆರ್ಪಿ ತುಕಡಿಗಳನ್ನು ಭದ್ರತೆಗೆ ಬಳಸಿಕೊಳ್ಳಲಾಗುತ್ತದೆ. ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜು ಕಟ್ಟಡ ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಕಟ್ಟಡದಲ್ಲಿ ಮತ ಎಣಿಕೆ ಕಾರ್ಯ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಸ್ಪರ್ಧೆಯಿಂದಾಗಿ ಹೈವೋಲ್ಟೇಜ್ ಕ್ಷೇತ್ರವಾಗಿ ಪರಿವರ್ತನೆಗೊಂಡಿದೆ. ಇನ್ನೊಂದೆಡೆ ಮತ ಎಣಿಕೆ ವೇಳೆ ಹಸ್ತಕ್ಷೇಪ ನಡೆಯಬಹುದೆಂಬ ಅನುಮಾನದಿಂದ ಬಿಜೆಪಿ ಅಭ್ಯರ್ಥಿ ಜಿ ಎಸ್ ಬಸವರಾಜ್ ನಿಷ್ಪಕ್ಷಪಾತ ಮತ ಎಣಿಕೆ ನಡೆಸಬೇಕೆಂದು ರಾಜ್ಯ ಚುನಾವಣಾ ಆಯುಕ್ತರಿಗೆ ಪತ್ರ ಕೂಡ ಬರೆದಿದ್ದರು. ನಾಲ್ವರು ಚುನಾವಣಾ ವೀಕ್ಷಕರು ತಲಾ 2 ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಮೇಲುಸ್ತುವಾರಿಯನ್ನು ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ರಾಕೇಶಕುಮಾರ್ ತಿಳಿಸಿದ್ದಾರೆ.