ತುಮಕೂರು: ಚಾಲಕನ ನಿಯಂತ್ರಣ ತಪ್ಪಿ ಟ್ರಾಕ್ಟರ್ ಪಲ್ಟಿಯಾಗಿ ಐವರು ಮೃತಪಟ್ಟು, 10 ಮಂದಿ ಗಾಯಗೊಂಡಿರುವ ಘಟನೆ ಜಿಲ್ಲೆಯ ತಿಪಟೂರು ತಾಲೂಕಿನ ಹತ್ಯಾಳು ಬೆಟ್ಟದಲ್ಲಿ ನಡೆದಿದೆ.
ಚಿಕ್ಕನಾಯಕನಹಳ್ಳಿ ತಾಲೂಕಿನ ಮಾದಾಪುರ ಗ್ರಾಮದ ಶಿವಲಿಂಗಯ್ಯ (50), ಚಿಕ್ಕನಾಯಕನಹಳ್ಳಿ ತಾಲೂಕಿನ ರಾಮಘಟ್ಟದ ದೊಡ್ಡ ನಿಂಗಯ್ಯ (48), ರಾಮಘಟ್ಟ ಗ್ರಾಮದ ಶಂಕರಮ್ಮ (45) ಮೃತಪಟ್ಟ ದುರ್ದೈವಿಗಳು ಮತ್ತು ಏಳು ವರ್ಷದ ಭುವನ್ ಎಂಬ ಬಾಲಕ ಕೂಡ ಸ್ಥಳದಲ್ಲಿಯೇ ಅಸುನೀಗಿದ್ದಾನೆ. ಮತ್ತೊಬ್ಬರು ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಅವರನ್ನ ನಾಗರಾಜ್ (45) ಎಂದು ಗುರುತಿಸಲಾಗಿದೆ.
ಗಾಯಾಳುಗಳನ್ನು ತಿಪಟೂರು ಮತ್ತು ತುಮಕೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಏನಿದು ಘಟನೆ?
ತಿಪಟೂರು ತಾಲೂಕಿನ ಹತ್ಯಾಳು ನರಸಿಂಹಸ್ವಾಮಿ ದೇವಸ್ಥಾನಕ್ಕೆ ಇಂದು ಸುಮಾರು 15 ಮಂದಿ ಟ್ರ್ಯಾಕ್ಟರ್ನಲ್ಲಿ ತೆರಳಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪೂಜೆ ಬಳಿಕ ಅಲ್ಲಿಯೇ ಊಟ ಮಾಡಿ ಗ್ರಾಮಕ್ಕೆ ವಾಪಸ್ ಆಗುತ್ತಿದ್ದರು. ಈ ವೇಳೆ, ಬೆಟ್ಟದ ಮೇಲಿಂದ ಕಡಿದಾದ ಇಳಿಜಾರಿನಲ್ಲಿ ಸಾಗುತ್ತಿದ್ದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಪರಿಣಾಮ ಟ್ರ್ಯಾಕ್ಟರ್ನಲ್ಲಿ ಐವರು ಮೃತಪಟ್ಟು ಇನ್ನುಳಿದವರು ಗಾಯಗೊಂಡಿದ್ದಾರೆ. ಈ ಸಂಬಂಧ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.