ತುಮಕೂರು: ಮಧುಗಿರಿ ತಾಲೂಕು ಬ್ಯಾಲ್ಯ ಗ್ರಾಮದಲ್ಲಿ ನಿವೇಶನ ನೀಡುವಂತೆ ಒತ್ತಾಯಿಸಿ ಧರಣಿ ನಡೆಸುತ್ತಿದ್ದ ವಸತಿ ಹೀನರಿಗೆ ಬೇರೊಂದು ಗ್ರಾಮದಲ್ಲಿ ನಿವೇಶನ ನೀಡಲು ನಿರ್ಧರಿಸಿರುವುದಾಗಿ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.
ಐದು ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿ ವತಿಯಿಂದ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಬಂದ ಡಿಸಿ, ದೊಡ್ಡಹೊಸಹಳ್ಳಿ ಗ್ರಾಮದಲ್ಲಿ ಭೂಮಿ ಗುರುತಿಸಿ 83 ಜನರಿಗೆ ನಿವೇಶನ ನೀಡುವುದಾಗಿ ಧರಣಿ ನಿರತರಿಗೆ ತಿಳಿಸಿದರು.
ಜಿಲ್ಲಾಧಿಕಾರಿಗಳ ನಿರ್ಧಾರಕ್ಕೆ ಒಪ್ಪದ ಬ್ಯಾಲ್ಯ ಗ್ರಾಮದ ವಸತಿ ಹೀನರು, ಗ್ರಾಮದಲ್ಲಿಯೇ ನಿವೇಶನ ನೀಡಬೇಕೆಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಬ್ಯಾಲ್ಯ ಗ್ರಾಮದಲ್ಲಿ ಯಾವುದೇ ರೀತಿಯ ಸರ್ಕಾರಿ ಜಮೀನು ಇಲ್ಲ. ಅಲ್ಲದೆ ಖಾಸಗಿ ಭೂಮಿ ಕೂಡ ಲಭ್ಯವಿಲ್ಲ ಎಂದು ಸ್ಪಷ್ಟನೆ ನೀಡಿದರು.