ತುಮಕೂರು: ಬಹುತೇಕ ಕಾರ್ಮಿಕರು ನಗರ ಪ್ರದೇಶದಿಂದ ಗ್ರಾಮೀಣ ಪ್ರದೇಶಗಳಿಗೆ ವಾಪಸ್ ಬಂದಿದ್ದು, ಅಂತಹ ಕಾರ್ಮಿಕರಿಗೆ ಅವರ ವಾಸ ಸ್ಥಳದಲ್ಲಿಯೇ ಮಹಾತ್ಮ ಗಾಂಧಿ ನರೇಗಾ ಯೋಜನೆಗಳಡಿ ಕೂಲಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ.
ಕೂಲಿಕಾರ್ಮಿಕರಿಗೆ ದಿನವೊಂದಕ್ಕೆ 275 ರೂ. ಕೂಲಿ ನಿಗದಿಪಡಿಸಿದ್ದು, ನೇರವಾಗಿ ಅವರ ಖಾತೆಗಳಿಗೆ 15 ದಿನಗಳಲ್ಲಿ ಕೂಲಿ ಹಣ ಜಮೆ ಮಾಡಲಾಗುವುದು. ಒಂದು ಕುಟುಂಬಕ್ಕೆ 100 ದಿನಗಳ ಕಾಲ ಕೂಲಿಯನ್ನು ನೀಡಲಾಗುತ್ತಿದೆ.
ಅರ್ಹ ಕುಟುಂಬಗಳು ತಮ್ಮ ಜಮೀನಿನಲ್ಲಿ ಬದು ನಿರ್ಮಾಣ, ಎರೆಹುಳು ಗೊಬ್ಬರ ತಯಾರಿಕೆ ಘಟಕ, ದನ, ಕುರಿ, ಕೋಳಿ ಶೆಡ್ ನಿರ್ಮಾಣ, ಕೃಷಿ ಹೊಂಡ, ಜಮೀನು ಅಭಿವೃದ್ಧಿ ಕಾಮಗಾರಿ, ಇಂಗು ಗುಂಡಿ ಕಾಮಗಾರಿ ಮಾಡುವ ಮೂಲಕ ಸರ್ಕಾರದ ಹಣವನ್ನು ಪಂಚಾಯಿತಿ ಮೂಲಕ ಕೂಲಿ ಕಾರ್ಮಿಕರ ಖಾತೆಗೆ ಜಮೆ ಮಾಡಲಾಗುವುದು ಎಂದು ಜಿಪಂ ಪ್ರಕಟಣೆಯಲ್ಲಿ ತಿಳಿಸಿದೆ.