ತುಮಕೂರು: ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಗರದ ಎಂಪ್ರೆಸ್ ಶಾಲೆಯಲ್ಲಿ ಚಾಲನೆ ನೀಡಿದರು. ಬಳಿಕ ಮಕ್ಕಳ ಜೊತೆಗೆ ಸಂವಾದ ನಡೆಸಿ, ಅವರ ಬೇಕು, ಬೇಡಗಳಿಗೆ ಸ್ಪಂದಿಸಿದರು. ಬೆಳ್ಳಾವಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಜೀವಿತಾ, 'ಸರ್, ನಮ್ಮ ಶಾಲೆಯಲ್ಲಿ ನಾವೇ ಶೌಚಾಲಯ ಸ್ವಚ್ಚಗೊಳಿಸಬೇಕಿದೆ. ಅದನ್ನು ಸ್ವಚ್ಚಗೊಳಿಸಲು ಸಿಬ್ಬಂದಿ ನೇಮಿಸಿ' ಎಂದು ಕೇಳಿಕೊಂಡರು. ತಕ್ಷಣ ಇದಕ್ಕೆ ಸ್ಪಂದಿಸಿದ ಸಿಎಂ, ಶಾಲೆಯ ಮುಖ್ಯೋಪಾಧ್ಯಾಯರನ್ನು ಕರೆಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.
ಶಾಲೆಗೆ ಬರುವ ಹೆಣ್ಣು ಮಕ್ಕಳಿಗೆ ರೆಸ್ಟ್ ರೂಂ ಕಟ್ಟಿಸಿಕೊಟ್ಟರೆ ಅನುಕೂಲವಾಗಲಿದೆ ಎಂದು ತುಮಕೂರಿನ ಗಾಂಧಿ ನಗರದ ಲಕ್ಷ್ಮಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಮನವಿ ಮಾಡಿದಳು. ಇದಕ್ಕೆ ಪೂರಕ ವ್ಯವಸ್ಥೆ ಮಾಡುವುದಾಗಿ ಸಿಎಂ ತಿಳಿಸಿದರು. ಕಳೆದೆರಡು ವರ್ಷಗಳಿಂದ ಬೈಸಿಕಲ್ ನೀಡುವ ಯೋಜನೆಯನ್ನು ನಿಲ್ಲಿಸಲಾಗಿದೆ. ಶೀಘ್ರವೇ ಬೈಸಿಕಲ್ ವಿತರಿಸಬೇಕು ಎಂದು ಬೆಳ್ಳಾವಿ ಪ್ರೌಢಶಾಲೆಯ ವಿದ್ಯಾರ್ಥಿನಿ ಅಮೂಲ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದಳು. ಕೋವಿಡ್ ಕಾರಣದಿಂದ ಎರಡು ವರ್ಷಗಳಿಂದ ಶಾಲೆಗಳಲ್ಲಿ ಬೈಸಿಕಲ್ ವಿತರಿಸಲಾಗಿಲ್ಲ. ಈ ಬಾರಿ ವಿತರಿಸುತ್ತೇವೆ ಎಂದು ಸಿಎಂ ಭರವಸೆ ನೀಡಿದರು.
ಇದನ್ನೂ ಓದಿ: 21ನೇ ಶತಮಾನದಲ್ಲಿ ಜ್ಞಾನಕ್ಕೆ ಮಾತ್ರ ಮಹತ್ವವಿದೆ: ಸಿಎಂ ಬೊಮ್ಮಾಯಿ