ತುಮಕೂರು: ಶಾಲೆಗಳಲ್ಲಿ ನಮಾಜ್ ಮಾಡಬೇಕು ಎಂಬ ಹಕ್ಕನ್ನು ಸರ್ಕಾರ ಕೊಟ್ಟಿಲ್ಲ. ಆದರೆ, ಗಣೇಶೋತ್ಸವ ಸಂಪ್ರದಾಯ ಈ ನೆಲದಲ್ಲಿ ಬೆಳೆದು ಬಂದಿತ್ತು. ಹಾಗಾಗಿ, ಅವೆಲ್ಲವೂ ಪದ್ಧತಿ ಪ್ರಕಾರವೇ ನಡೆಯುತ್ತದೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ತಿಳಿಸಿದರು.
ತಿಪಟೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗಣೇಶೋತ್ಸವ ಭಾರತೀಯ ಹಬ್ಬ. ಅದನ್ನು ಶಾಲಾ-ಕಾಲೇಜುಗಳಲ್ಲಿ ಆಚರಿಸಲು ಯಾವುದೇ ಆದೇಶ ಹೊರಡಿಸಿಲ್ಲ. ಆದರೆ, ವಿದ್ಯಾಧಿಪತಿ ಗಣಪತಿಯನ್ನು ಎಲ್ಲೆಡೆಯೂ ಪೂಜಿಸಲಾಗುತ್ತದೆ. ಇದು ನಮ್ಮ ಸಂಸ್ಕೃತಿಯಲ್ಲೇ ಬಂದಿದೆ ಎಂದರು.
ಗಣಪತಿ ಉತ್ಸವಗಳು ಮನೆಗಳಲ್ಲಿ ನಡೆಯುತ್ತಿದ್ದವು. ಆದರೆ, ಬಾಲಗಂಗಾಧರ ತಿಲಕ್ ಭಾರತೀಯರನ್ನು ಒಗ್ಗೂಡಿಸಿಕೊಳ್ಳಲು ಗಣಪತಿ ಉತ್ಸವಗಳನ್ನು ಸ್ವಾತಂತ್ರ್ಯ ಚಳವಳಿಯಲ್ಲಿ ಹೋರಾಟದ ಅಸ್ತ್ರವಾಗಿ ರೂಪಿಸಿದ್ದರು. ಈ ಮೂಲಕ ಜನರನ್ನು ಸ್ವಾತಂತ್ರ್ಯ ಪಡೆಯಲು ಉತ್ತೇಜಿಸಿದ್ದರು. ಈ ಸಂಪ್ರದಾಯ ಶಾಲಾ ಕಾಲೇಜು, ಹಾಸೆಲ್‌ಗಳಲ್ಲಿ ನಡೆದುಕೊಂಡು ಬಂದಿದೆ ಎಂದು ಹೇಳಿದರು.
ಈ ಹಬ್ಬವನ್ನು ಹೊಸದಾಗಿ ಆಚರಿಸಿ ಅಥವಾ ಆಚರಿಸಬೇಡಿ ಎಂಬಂಥ ಯಾವುದೇ ಆದೇಶವನ್ನು ಸರ್ಕಾರ ಹೊರಡಿಸಿಲ್ಲ. ಯಾವ ಸಂಪ್ರದಾಯ ಈ ನೆಲದಲ್ಲಿ ಬೆಳೆದು ಬಂದಿತ್ತೋ ಅವೆಲ್ಲವೂ ಪದ್ಧತಿ ಪ್ರಕಾರವೇ ನಡೆಯುತ್ತದೆ. ನಮ್ಮ ಬಿಜೆಪಿ ಸರ್ಕಾರ ಬರುವುದಕ್ಕೂ ಮೊದಲಿನಿಂದಲೂ ಇದು ಹಾಸುಹೊಕ್ಕಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ರಾಯಚೂರು ಬಗ್ಗೆ ತೆಲಂಗಾಣ ಸಿಎಂ ಹೇಳಿಕೆ: ಬಿಜೆಪಿ ಸರ್ಕಾರದ ಮೌನ ಪ್ರಶ್ನಿಸಿದ ಕಾಂಗ್ರೆಸ್