ತುಮಕೂರು: ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ಆಂಧ್ರಪ್ರದೇಶದ ಮೂಲದ ತಂಡವೊಂದು ಕೊರಳಿಗೆ ಮಾರುದ್ದ ಹಾವುಗಳನ್ನು ಸುತ್ತಿಕೊಂಡು ಭಿಕ್ಷಾಟನೆ ಮಾಡುತ್ತಿರುವ ದೃಶ್ಯಗಳು ಕಂಡು ಬಂದಿದೆ.
ಈ ತಂಡ ಪ್ಲಾಸ್ಟಿಕ್ ಬಾಟಲ್ಗಳಲ್ಲಿ ಹಾವಿನ ಮರಿಗಳನ್ನು ತುಂಬಿ ಸಣ್ಣ ಮಕ್ಕಳಿಗೂ ಅದನ್ನು ಕೊಟ್ಟು ಸಾಕಷ್ಟು ಗಾಬರಿ ಹುಟ್ಟಿಸಿದೆ. ಪಾವಗಡ ಪಟ್ಟಣದಾದ್ಯಂತ ಕಳೆದ ಒಂದು ವಾರದಿಂದ ಏಳೆಂಟು ಮಂದಿ ವಿವಿಧ ರಸ್ತೆಗಳು ಅಂಗಡಿ - ಮುಂಗಟ್ಟುಗಳು ಮನೆ ಮನೆಗೆ ತೆರಳಿ ಹಾವುಗಳನ್ನು ತೋರಿಸಿ ಭಿಕ್ಷೆ ಬೇಡುತ್ತಿದ್ದಾರೆ.
ಅಲ್ಲದೇ ಹಾವುಗಳಲ್ಲಿ ಕಲ್ಲಿನ ಆಕಾರದ ಮಣಿಗಳಿದ್ದು ಅವುಗಳನ್ನು ತೆಗೆದುಹಾಕಿದ್ದೇವೆ ಹೀಗಾಗಿ ಅವುಗಳಲ್ಲಿ ವಿಷವಿಲ್ಲ ಎಂದು ಹೇಳಿ ಭಿಕ್ಷಾಟನೆ ಮಾಡುತ್ತಿರುವುದಾಗಿ ಜನರಿಗೆ ಹೇಳುತ್ತಿದ್ದಾರೆ. ಆದರೆ ಮೂಕ ಪ್ರಾಣಿಯನ್ನು ಹಿಂಸಿಸಿ ಹೊಟ್ಟೆ ತುಂಬಿಸಿಕೊಳ್ಳುವುದು ಯಾವ ನ್ಯಾಯ ಎಂದು ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.