ತುಮಕೂರು: ನಗರದ ಹೃದಯ ಭಾಗದಲ್ಲಿರುವ ನಾಗರಕಟ್ಟೆ ಮತ್ತು ಜೋಡಿ ದರ್ಗಾವನ್ನು ರಸ್ತೆ ಅಗಲೀಕರಣಕ್ಕಾಗಿ ತೆರವುಗೊಳಿಸುವ ಬದಲು ಮೇಲ್ಸೇತುವೆ ನಿರ್ಮಿಸುವಂತೆ ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅತೀಕ್ ಅಹ್ಮದ್ ಅವರು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ತುಮಕೂರು ನಗರದ ಟೌನ್ ಹಾಲ್ ಬಳಿ ಬಿ ಹೆಚ್ ರಸ್ತೆಗೆ ಹೊಂದಿಕೊಂಡಂತಿರುವ ನಾಗರಕಟ್ಟೆ ದೇವಸ್ಥಾನ ಮತ್ತು ಜೋಡಿ ದರ್ಗಾವನ್ನು ರಸ್ತೆ ಅಗಲೀಕರಣಕ್ಕಾಗಿ ತೆರವುಗೊಳಿಸಲು ಜಿಲ್ಲಾಧಿಕಾರಿಗಳು ಸೂಚಿಸಿರುವುದರಿಂದ ಭಕ್ತರಲ್ಲಿ ಆತಂಕ ಮನೆ ಮಾಡಿದೆ. ದೇವಸ್ಥಾನ ಹಾಗೂ ದರ್ಗಾವನ್ನು ತೆರವುಗೊಳಿಸದೇ ಮೇಲ್ಸೇತುವೆ ನಿರ್ಮಿಸುವ ಮೂಲಕ ಐತಿಹಾಸಿಕ ಸ್ಮಾರಕವಾಗಿರುವ ಎರಡು ಸ್ಥಳಗಳನ್ನು ಉಳಿಸಬೇಕು ಎಂದು ಅತೀಕ್ ಅಹ್ಮದ್ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅತೀಕ್ ಅಹ್ಮದ್, ನಾಗರಕಟ್ಟೆ ದೇವಸ್ಥಾನ ಮತ್ತು ಜೋಡಿ ದರ್ಗಾವನ್ನು ತೆರವುಗೊಳಿಸಬೇಕೆಂದು ಜಿಲ್ಲಾಧಿಕಾರಿಗಳು ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ತಿಳಿಸಿದ್ದರು. ಹಾಗಾಗಿ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಈ ಮನವಿಯಲ್ಲಿ ಮೇಲ್ಸೇತುವೆ ನಿರ್ಮಿಸುವ ಮೂಲಕ ಎರಡು ಧಾರ್ಮಿಕ ಸ್ಥಳಗಳನ್ನು ಉಳಿಸಬೇಕು ಎಂದು ತಿಳಿಸಲಾಗಿದೆ ಎಂದರು. ಈ ಹಿಂದೆ ಸಂಸದರಾಗಿದ್ದಾಗ ಜಿ ಎಸ್ ಬಸವರಾಜು ಅವರು ಈ ಸಮಸ್ಯೆಗೆ ಮೇಲ್ಸೇತುವೆ ನಿರ್ಮಿಸುವ ಮೂಲಕ ಪರಿಹಾರ ಕಂಡುಕೊಳ್ಳಲಾಗುವುದು ಎಂದಿದ್ದರು. ಹಾಗಾಗಿ ಅವರು ದರ್ಗಾ ಹಾಗೂ ನಾಗರಕಟ್ಟೆಯನ್ನು ಉಳಿಸಲು ಮೇಲ್ಸೇತುವೆ ನಿರ್ಮಿಸುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂದರು.