ತುಮಕೂರು: ಬೆಂಗಳೂರಿನ ಡಿ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಪಾಲ್ಗೊಂಡಿದ್ದಾರೆ ಎಂಬ ಕೆಲ ಸಂಘಟನೆಗಳ ವಿರುದ್ಧ ಯಾವುದೇ ರೀತಿಯ ದಾಖಲೆಗಳಿಲ್ಲದೆ ಕ್ರಮ ತೆಗೆದುಕೊಳ್ಳುವುದು ಕಷ್ಟ. ಮೇಲ್ನೋಟಕ್ಕೆ ಕೆಲ ಅನುಮಾನಗಳು ಕಂಡು ಬಂದಿವೆ. ತನಿಖೆ ನಂತರವಷ್ಟೇ ಕ್ರಮ ಕೈಗೊಳ್ಳಬಹುದು ಎಂದು ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದರು.
ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳ ನಿಷೇಧಕ್ಕೆ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿರುವುದು ಸಚಿವ ಈಶ್ವರಪ್ಪ ಅವರ ಅಭಿಪ್ರಾಯ ಇರಬಹುದು. ಆದರೆ ಸರ್ಕಾರ ಇನ್ನೂ ಯಾವುದೇ ರೀತಿಯ ನಿರ್ಧಾರಕ್ಕೆ ಬಂದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಘಟನೆಗೆ ಸಂಬಂಧಪಟ್ಟಂತೆ ಪೊಲೀಸ್ ಇಲಾಖೆ ಮೇಲೆ ವಿಶ್ವಾಸವಿದೆ. ಅದನ್ನು ಪತ್ತೆ ಹಚ್ಚುವ ಕುರಿತಂತೆ ಪೊಲೀಸರಿಗೆ ತರಬೇತಿಗಳು ಕೂಡ ನಡೆದಿರುತ್ತವೆ. ಆದರೆ ನ್ಯಾಯಾಂಗ ತನಿಖೆಯಲ್ಲಿ ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಪೊಲೀಸ್ ತನಿಖೆ ಪ್ರಗತಿಯಲ್ಲಿ ಇದ್ದಾಗ ನ್ಯಾಯಾಂಗ ತನಿಖೆ ಕುರಿತು ನಿರ್ಧರಿಸುವುದು ಸರಿಯಾಗುವುದಿಲ್ಲ ಎಂದರು.
ಗಲಭೆಗೆ ಸಂಬಂಧಪಟ್ಟಂತೆ ಪೊಲೀಸರು ಯಾರೂ ದೂರು ಕೊಡದಿದ್ದರೂ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಯಾರು ಕೂಡ ದೂರು ಕೊಡಬೇಕು ಎಂದು ಇಲ್ಲ. ಶಾಸಕ ಜಮೀರ್ ಅಹಮದ್ ಅವರು ರಾಜಕೀಯಕ್ಕೆ ಬಂದಿರುವ ದಾರಿ ಬೇರೆ, ನಾನು ಬಂದಿರುವ ದಾರಿಯೇ ಬೇರೆ. ಹೀಗಾಗಿ ಅವರ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪ್ರವಾಹದಿಂದ ರಾಜ್ಯದಲ್ಲಿ ಈ ಬಾರಿ ₹4,000 ಕೋಟಿ ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ. ಆದರೆ ಎನ್ಡಿಆರ್ಎಫ್ ನಿಯಮಾವಳಿಗಳೇ ಬೇರೆ ಇರುತ್ತದೆ ಎಂದರು.