ತುಮಕೂರು: ಸಾಮಾನ್ಯವಾಗಿ ಮೂಕ ಪ್ರಾಣಿಗಳಿಗೆ ಆಹಾರ ನೀಡುವ ಮನಸ್ಸುಳ್ಳ ಜನರು ಕಾಣ ಸಿಗುವುದು ಅಪರೂಪ. ಕಾಡಿನಿಂದ ನಾಡಿಗೆ ಆಹಾರ ಹುಡುಕಿಕೊಂಡು ಬರುವ ಕೋತಿಗಳಿಗೆ ಇಲ್ಲೊಬ್ಬರು ತಾಜಾ ತಾಜಾ ತರಕಾರಿಗಳನ್ನು ನೀಡುತ್ತಾ ಕಪಿಸೇನೆಯ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ.
ಜಿಲ್ಲೆಯ ಮಧುಗಿರಿ ತಾಲೂಕಿನ ನಾಗಯ್ಯನಪಾಳ್ಯದ ನಿವಾಸಿ ಸುವರ್ಣಮ್ಮ ಎಂಬುವರು ಇಂತಹ ನಿಸ್ವಾರ್ಥ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಿತ್ಯ ಪಕ್ಕದ ಕೋಡಗದಾಲ ಗ್ರಾಮದ ಸರ್ಕಾರಿ ಶಾಲೆಯ ಬಳಿ ಹಾಜರಾಗುತ್ತಾರೆ. ತಮ್ಮೊಂದಿಗೆ ಎರಡು ಬ್ಯಾಗ್ ತುಂಬ ಕಡಲೆಕಾಯಿ, ದ್ರಾಕ್ಷಿ, ಸೌತೆಕಾಯಿ, ಬಾಳೆಹಣ್ಣು, ಬಿಸ್ಕತ್, ಟಮೋಟೋ ಸೇರಿದಂತೆ ತಾಜಾ ತಾಜಾ ತರಕಾರಿಗಳನ್ನು ತಂದು ತನ್ನ ಮಕ್ಕಳಿಗೆ ಹಣ್ಣುಗಳನ್ನು ವಿತರಿಸುವಂತೆ ಕೋತಿಗಳಿಗೆ ನೀಡುತ್ತಾರೆ.
ಪ್ರತಿ ದಿನ 20 ಕಿ.ಮೀ. ಅಂತರದಲ್ಲಿರುವ ಮಧುಗಿರಿ ಪಟ್ಟಣಕ್ಕೆ ತೆರಳಿ ಸುಮಾರು 400 ರೂ. ಮೌಲ್ಯದ ಹಣ್ಣು ತರಕಾರಿಯನ್ನು ತಂದು ನೀಡುತ್ತಾರೆ. ಸುಮಾರು 20 ವರ್ಷಗಳಿಂದ ಈ ರೀತಿ ಮಂಗಗಳಿಗೆ ಆಹಾರ ನೀಡುವ ಮೂಲಕ ಮೂಕ ಪ್ರಾಣಿಗಳ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದು, ಈ ವೃದ್ಧೆಯ ಸುತ್ತಲೂ ನೂರಾರು ಕೋತಿಗಳು ಕುಳಿತು ಹಣ್ಣು, ತರಕಾರಿ ತಿನ್ನುವುದನ್ನು ನೋಡುವುದಕ್ಕೆ ಸಂತಸ. ಅಷ್ಟೇ ಅಲ್ಲದೆ ಕೆಲ ಮರಿ ಕೋತಿಗಳಂತೂ ಸುವರ್ಣಮ್ಮ ನೀಡುವ ಸೌತೆಕಾಯಿ ಪಡೆದುಕೊಳ್ಳಲು ಅವರ ಹೆಗಲ ಮೇಲೆಯೇ ಕುಳಿತುಕೊಳ್ಳುತ್ತವೆ.
ಸುವರ್ಣಮ್ಮ ದಿನವೂ ಮಧ್ಯಾಹ್ನದ ನಂತರ ಸಂಜೆ 5 ಗಂಟೆವರೆಗೂ ಕೋತಿಗಳಿಗೆ ಆಹಾರ ನೀಡಿ ಮನೆಗೆ ತೆರಳುವುದು ದೈನಂದಿನ ಕಾಯಕವಾಗಿದೆ. ಇಂದು ವೇಳೆ ಇವರು ಬರಲು ಆಗದಿದ್ದ ಇವರ ಪತಿ ಸುಬ್ಬಣ್ಣ ಬಂದು ಕೋತಿಗೆ ಆಹಾರ ಕೊಡುತ್ತಾರೆ. ಸುಬ್ಬಣ್ಣ ನಿವೃತ್ತ ಸರ್ಕಾರಿ ಶಾಲಾ ಶಿಕ್ಷಕರಾಗಿದ್ದು, ಇವರಿಗೆ ಮೂವರು ಮಕ್ಕಳಿದ್ದಾರೆ. ಇವರೂ ಕೂಡ ತಮ್ಮ ತಾಯಿಯ ನಿಸ್ವಾರ್ಥ ಸೇವೆಗೆ ಸಾಥ್ ನೀಡುತ್ತಿದ್ದಾರೆ.