ಶಿವಮೊಗ್ಗ: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಇಬ್ಬರು ಪಾದಚಾರಿ ಯುವತಿಯರಿಗೆ ಲಗೇಜ್ ಆಟೋ ಡಿಕ್ಕಿ ಹೊಡೆದ ಘಟನೆ ಜಿಲ್ಲೆಯ ಸಾಗರ ಪಟ್ಟಣದಲ್ಲಿ ನಡೆದಿದೆ.
ಸಾಗರದ ಬಿ.ಹೆಚ್ ರಸ್ತೆಯ ಸುಜುಕಿ ಶೋ ರೂಮ್ ಎದುರು ಶುಕ್ರವಾರ ಸಂಜೆ ಲಗೇಜ್ ಆಟೋ ರಸ್ತೆಯ ಮಧ್ಯೆ ಬಂದ ಬೈಕ್ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ, ಅದೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಯುವತಿಯರಿಗೆ ಗುದ್ದಿದೆ. ಯುವತಿಯರು ಸಾಗರದ ಎಸ್.ಎನ್ ನಗರದ ನಿವಾಸಿಗಳೆಂದು ತಿಳಿದು ಬಂದಿದೆ. ಇದರಲ್ಲಿ ಒಬ್ಬ ಯುವತಿಯ ಸ್ಥಿತಿ ಗಂಭೀರವಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಬ್ಬ ಯುವತಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅಪಘಾತಕ್ಕೀಡಾಗಿರುವ ಯುವತಿಯರು ಕಂಪ್ಯೂಟರ್ ಕ್ಲಾಸ್ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಸಾಗರ ಉಪ ವಿಭಾಗದ ಪೊಲೀಸ್ ಅಧೀಕ್ಷಕರು ರೋಹನ್ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸಾಗರ ಪೇಟೆ ಪೊಲೀಸರು ಆಟೋ ಚಾಲಕನನ್ನು ವಶಕ್ಕೆ ಪಡೆದು, ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮಂಡ್ಯ: ಆಟೋಗೆ ಟಿಪ್ಪರ್ ಲಾರಿ ಡಿಕ್ಕಿಯಾಗಿ ಗ್ರಾ.ಪಂ.ಅಧ್ಯಕ್ಷೆ ಸೇರಿ ಒಂದೇ ಕುಟುಂಬದ ಐವರ ದುರ್ಮರಣ
ಮೆಸ್ಕಾಂ ದಂಡ ವಸೂಲಿಗೆ ಆಕ್ರೋಶ:
ಅಪಘಾತದಲ್ಲಿ ಲಗೇಜ್ ಆಟೋ ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಸಹ ಡಿಕ್ಕಿ ಹೊಡೆದಿದೆ. ಇದರಿಂದ ಕಂಬಕ್ಕೆ ಹಾನಿಯಾಗಿದ್ದು, ವಿಚಾರ ತಿಳಿದ ಮೆಸ್ಕಾಂ ಇಂಜಿನಿಯರ್ ಸ್ಥಳಕ್ಕೆ ಬಂದು ಕೇಸ್ ದಾಖಲಿಸದೇ, ಆಟೋ ಚಾಲಕನಿಂದ 20 ಸಾವಿರ ರೂ. ಪಡೆದು ವಾಪಸ್ ಆಗಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರ ಬಗ್ಗೆ ವಿಚಾರಿಸದೇ ಮೆಸ್ಕಾಂ ಇಲಾಖೆ ಕೇವಲ ತಮ್ಮ ಸ್ವತ್ತು ಹಾನಿಯ ಬಗ್ಗೆ ಮಾತ್ರ ಮಾಹಿತಿ ಪಡೆದು, ದಂಡ ವಸೂಲಿ ಮಾಡಿರುವುದು ಖಂಡನೀಯ. ಮೆಸ್ಕಾಂ ಇಂಜಿನಿಯರ್ಗೆ ಮಾನವೀಯತೆ ಇಲ್ಲವೇ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.