ಶಿವಮೊಗ್ಗ: ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಸಾಗರ ತಾಲೂಕಿನ ಇರುವಕ್ಕಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಮಂಗಳವಾರ ಬೆಳ್ಳಂಬೆಳಗ್ಗೆ ನಗರದ ಇರುವಕ್ಕಿಯಲ್ಲಿರುವ ಶಾಲೆಯಿಂದ ಆನಂದಪುರಂವರೆಗೂ ಸುಮಾರು 5 ಕಿ.ಮೀ ದೂರ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಿದರು.
ವಸತಿ ಶಾಲೆಯ ಪ್ರಾಂಶುಪಾಲ ಬಿ.ಕೆ. ಚಂದ್ರಪ್ಪ ಹಾಗೂ ಕೆಲ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಕಾಲಿನಿಂದ ಒದ್ದು ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಕಳಪೆ ಗುಣಮಟ್ಟದ ಆಹಾರವನ್ನು ವಸತಿ ಶಾಲೆಯಲ್ಲಿ ನೀಡಲಾಗುತ್ತಿದೆ. ಇದನ್ನು ಪ್ರಶ್ನಿಸಿದರೆ, ವಿದ್ಯಾರ್ಥಿಗಳಿಗೆ ಕೆಟ್ಟ ಪದಗಳಿಂದ ನಿಂದಿಸಿ ವರ್ಗಾವಣೆ ಪತ್ರ (ಟಿಸಿ) ಕೊಡುತ್ತೇವೆ. ನಾವು ಹೇಳಿದ ಹಾಗೆ ಕೇಳದಿದ್ದರೆ ಮನೆಗೆ ಕಳುಹಿಸುತ್ತೇವೆ ಎಂದು ಬೆದರಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ವಸತಿ ಶಾಲೆಯಲ್ಲಿ ಯಾವುದೇ ವ್ಯವಸ್ಥೆಯೂ ಸರಿಯಿಲ್ಲ. ಮೂಲಭೂತ ಸೌಕರ್ಯ ನೀಡದೆ ವಿದ್ಯಾರ್ಥಿಗಳಿಗೆ ವಂಚಿಸುತ್ತಿರುವ ಪ್ರಾಂಶುಪಾಲರನ್ನು ತಕ್ಷಣ ಅಮಾನತು ಮಾಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.