ಶಿವಮೊಗ್ಗ: ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿರುವ ಬೈಕ್ ಸವಾರರನ್ನು ಹಿಡಿದು ಅವರ ಕೈಯಲ್ಲಿದ್ದ ಬ್ಯಾಗ್ ತಪಾಸಣೆಗೊಳಪಡಿಸಿದಾಗ ರಾಶಿ-ರಾಶಿ ಮೊಬೈಲ್ ಪತ್ತೆಯಾಗಿವೆ. ಇಬ್ಬರನ್ನು ಬಂಧಿಸಿರುವ ಪೊಲೀಸರು ಮೊಬೈಲ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಭದ್ರಾವತಿ ಹೊಸಮನೆ ಬಡಾವಣೆಯ ಶ್ರೀನಿವಾಸ್ ಅಲಿಯಾಸ್ ಸೀನಾ (26) ಮತ್ತು ದುರ್ಗಿನಗರದ ಅಜಾಮ್ ಅಲಿಯಾಸ್ ಬಾಬು (38) ಬಂಧಿತ ಆರೋಪಿಗಳು.
ಬ್ಯಾಗ್ನಲ್ಲಿದ್ದವು ರಾಶಿ ರಾಶಿ ಮೊಬೈಲ್: ಮೊಬೈಲ್ ಕಳ್ಳರ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರು ಭದ್ರಾವತಿಯ ಸೀಗೆಬಾಗಿ ಗಣಪತಿ ದೇಗುಲದ ಬಳಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಬೈಕ್ನಲ್ಲಿ ಬಂದ ಇಬ್ಬರು ಯುವಕರು ಪೊಲೀಸರನ್ನು ಕಂಡು ಪರಾರಿಯಾಗಿಲು ಯತ್ನಿಸಿದ್ದಾರೆ. ಇವರನ್ನು ಹಿಡಿದ ತಪಾಸಣೆಗೊಳಪಡಿಸಲಾಗಿದೆ.
ಬೈಕ್ ಸವಾರರ ಬಳಿ ಇದ್ದ ಬ್ಯಾಗ್ ಪರಿಶೀಲನೆ ನಡೆಸಿದಾಗ ರಾಶಿ ರಾಶಿ ಮೊಬೈಲ್ಗಳು ಪತ್ತೆಯಾಗಿವೆ. ವಿವಿಧ ಕಂಪನಿಯ 10 ಲಕ್ಷದ ಮೊಬೈಲ್ಗಳು ಹಾಗೂ ಲ್ಯಾಪ್ ಟಾಪ್ ಪತ್ತೆಯಾಗಿವೆ.
ಇದನ್ನೂ ಓದಿರಿ: Mangalore college Covid: ಮಂಗಳೂರಿನಲ್ಲಿ ಮೂರನೇ ನರ್ಸಿಂಗ್ ಕಾಲೇಜ್ನಲ್ಲಿ ಕೊರೊನಾ ಸೋಂಕು
ಬ್ಯಾಗ್ನಲ್ಲಿ 120ಕ್ಕೂ ಹೆಚ್ಚು ಮೊಬೈಲ್ಗಳು ಪತ್ತೆಯಾಗಿದ್ದು, ಇವುಗಳ ಮೌಲ್ಯ 10 ಲಕ್ಷ ರೂ. ಎಂದು ಅಂದಾಜು ಮಾಡಲಾಗಿದೆ. ಜೊತೆಗೆ 20 ಸಾವಿರ ರೂ. ಮೌಲ್ಯದ ಲ್ಯಾಪ್ ಟಾಪ್ ಸಿಕ್ಕಿದೆ.ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಕೃತ್ಯಕ್ಕೆ ಬಳಸಿರುವ ಬೈಕ್ನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಸಿಪಿಐ ರಾಘವೇಂದ್ರ ಕಾಂಡಿಕೆ ಮಾರ್ಗದರ್ಶನದಲ್ಲಿ ಎ.ಎಸ್.ಐ ಮಹೇಶ್ವರ ನಾಯ್ಕ, ಸಿಬ್ಬಂದಿ ವಿಜಯಕುಮಾರ್, ಪ್ರಸನ್ನ ಸ್ವಾಮಿ, ನವೀನ್ ಪವಾರ್, ಹಾಲಪ್ಪ, ನಾರಾಯಣ ಸ್ವಾಮಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಓಲ್ಡ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.