ಶಿವಮೊಗ್ಗ: ಕೊವಿಡ್-19 ನಿಯಂತ್ರಣಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘ ಸಿಎಂ ಪರಿಹಾರ ನಿಧಿಗೆ 200 ಕೋಟಿ ರೂ. ನೀಡಲು ನಿರ್ಧಾರ ಮಾಡಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ.ಎಸ್.ಷಡಾಕ್ಷರಿ, ರಾಜ್ಯ ಸರ್ಕಾರಿ ನೌಕರರ ಸಂಘದ ಒಂದು ದಿನದ ವೇತನ ಸುಮಾರು 200 ಕೋಟಿ ರೂ. ಗಳಾಗುತ್ತದೆ. ಇದನ್ನು ಸಿಎಂ ಪರಿಹಾರ ನಿಧಿಗೆ ನೀಡಲು ತೀರ್ಮಾನಿಸಲಾಗಿದೆ. ಈ ಕುರಿತು ರಾಜ್ಯದ ಎಲ್ಲಾ ಜಿಲ್ಲಾಧ್ಯಕ್ಷರ ಜೊತೆ ಮಾತುಕತೆ ನಡೆಸಿದ ವೇಳೆ ಎಲ್ಲಾರು ದೇಣಿಗೆ ನೀಡಲು ಸಮ್ಮತಿ ಸೂಚಿಸಿದ್ದಾರೆ. ಇದರಿಂದ ಸಿಎಂ ಪರಿಹಾರ ನಿಧಿಗೆ ತಮ್ಮ ಒಂದು ದಿನದ ವೇತನ ನೀಡಲು ನಿರ್ಧಾರ ಮಾಡಲಾಗಿದೆ. ಇದು ದೇಶದಲ್ಲಿಯೇ ಪ್ರಥಮ ನಿರ್ಧಾರವಾಗಿದೆ. ಕಷ್ಟದಲ್ಲಿ ಇರುವವರಿಗೆ ಈ ಹಣವನ್ನು ಬಳಸಿಕೊಳ್ಳಬೇಕು ಎಂದು ಸಿಎಂಗೆ ವಿನಂತಿ ಮಾಡಿಕೊಂಡರು.
ಈ ಹಿಂದೆ ಸಾಕಷ್ಟು ಸಲ ರಾಜ್ಯ ಸಂಕಷ್ಟದಲ್ಲಿ ಇರುವಾಗ ಸಿಎಂ ಪರಿಹಾರ ನಿಧಿಗೆ ವೇತನವನ್ನು ನೀಡಲಾಗಿದೆ. ಇದರಿಂದ ನಮ್ಮ ವೇತನವನ್ನು ಸರ್ಕಾರ ಸ್ವೀಕಾರ ಮಾಡಬೇಕು. ಬೆಂಗಳೂರಿಗೆ ಹೋಗಲು ಆಗದ ಕಾರಣ ಮೇಲ್ ಮೂಲಕ ಮನವಿ ಮಾಡಿಕೊಳ್ಳಲಾಗುವುದು ಎಂದರು.
ಈ ವೇಳೆ ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯರಾದ ಶಾಂತರಾಜ್, ಮೋಹನ್ ಕುಮಾರ್, ಹೆಚ್.ಎಸ್.ರಘು, ಡಿ.ಬಿ.ರುದ್ರಪ್ಪ ಸೇರಿದಂತೆ ಇತರರು ಹಾಜರಿದ್ದರು.