ಶಿವಮೊಗ್ಗ: ನ್ಯೂಮಂಡ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆ ಪ್ರಾರಂಭವಾಗಿ 50 ವರ್ಷಗಳಾಗಿವೆ. ಆದರೆ ಶಾಲಾ ತರಗತಿಗಳಲ್ಲಿ ಇಲಿ, ಹೆಗ್ಗಣಗಳು ತೋಡಿರುವ ಗುಂಡಿಗಳು ಕಣ್ಣಿಗೆ ರಾಚುತ್ತಿವೆ. ಈ ಗುಂಡಿಗಳಿಂದ ತರಗತಿಯೊಳಗೆ ಹಾವುಗಳು ಬರುತ್ತಿವೆ. ಇಲಿ, ಹೆಗ್ಗಣ ಸತ್ತು ಕೊಳೆತ ವಾಸನೆಯಲ್ಲೇ ಮಕ್ಕಳು ಪಾಠ ಕೇಳುವ ಹಾಗೂ ಅಲ್ಲೇ ಊಟ ಮಾಡುವ ದುಸ್ಥಿತಿ ಇದೆ. ವಿದ್ಯಾಭ್ಯಾಸಕ್ಕೆ ಸೂಕ್ತ ಸೌಲಭ್ಯವಿರದ ಕಾರಣ ಕೆಲ ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ದಾಖಲಿಸಲು ತೀರ್ಮಾನಿಸಿದ್ದಾರೆ.
1ನೇ ತರಗತಿಯಿಂದ 7ನೇ ತರಗತಿಯವರೆಗಿನ ಶಾಲೆಯಲ್ಲಿ 174 ವಿದ್ಯಾರ್ಥಿಗಳು, 7 ಶಿಕ್ಷಕರಿದ್ದಾರೆ. ಆದರೆ ಕನಿಷ್ಠ ಸೌಕರ್ಯವಿಲ್ಲ. ಈ ಹಿಂದೆ ಹೆಂಚುಗಳು ಒಡೆದು ನೀರು ಸೋರುತ್ತಿದ್ದು ಶೀಟ್ಗಳನ್ನು ಹಾಕಲಾಗಿತ್ತು. ಮಳೆ ಬಂದರೆ ಶಾಲಾವರಣದಲ್ಲಿ ಎರಡು ಅಡಿ ನೀರು ನಿಲ್ಲುತ್ತದೆ. ಮಳೆ ನೀರು ತರಗತಿಗೂ ಬಂದು ನಿಲ್ಲುತ್ತಿದ್ದು, ನೆಲ ಸಂಪೂರ್ಣ ಹಾಳಾಗಿ ಹೋಗಿದೆ.
'ಹಾಲಿ ಶಾಲೆಯಲ್ಲಿ 1, 2, 6ನೇ ತರಗತಿ, ಸಮೀಪದ ಮಠದಲ್ಲಿ 5 ಮತ್ತು 7ನೇ ತರಗತಿಯನ್ನು ಹಾಗೂ ಪಕ್ಕದ ಗರಡಿ ಮನೆಯಲ್ಲಿ 4ನೇ ತರಗತಿಯನ್ನು ನಡೆಸಲಾಗುತ್ತಿದೆ' ಎಂದು ಮುಖ್ಯ ಶಿಕ್ಷಕಿ ಜಯಮ್ಮ ತಿಳಿಸಿದರು.
ಕಳೆದ ವರ್ಷ ಒಂದನೇ ತರಗತಿಗೆ 38 ವಿದ್ಯಾರ್ಥಿಗಳು ದಾಖಲಾಗಿದ್ದರು. ಆದರೆ ಈ ವರ್ಷ ಶಾಲೆಯ ಪರಿಸ್ಥಿತಿಯಿಂದ ಕೇವಲ 20 ಮಕ್ಕಳು ಮಾತ್ರ ದಾಖಲಾಗಿದ್ದಾರೆ. ಸ್ಮಾರ್ಟ್ ಕ್ಲಾಸ್ಗೆ ಬೇಕಾದ ಉಪಕರಣಗಳನ್ನು ಸ್ಮಾರ್ಟ್ ಸಿಟಿ ಯೋಜನೆ ನೀಡಿದೆ. ಆದರೆ ಇದನ್ನು ಬಳಕೆ ಮಾಡಿಕೊಳ್ಳುವ ಸ್ಥಿತಿಯಲ್ಲಿ ಶಾಲೆಯೇ ಇಲ್ಲ.
'ಶಾಲೆ ಯಾವಾಗ ಕುಸಿದು ಬೀಳಲಿದೆಯೋ ಅನ್ನೋ ಭಯದಲ್ಲಿ ಮತ್ತು ಮಕ್ಕಳನ್ನು ಶಾಲೆಗೆ ಕಳುಹಿಸಬೇಕೋ ಬೇಡವೋ ಎನ್ನುವ ಭಯದಲ್ಲಿದ್ದೇವೆ. ನಾವು ಕೂಲಿಕಾರರು. ನಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುವ ಆರ್ಥಿಕ ಶಕ್ತಿ ನಮ್ಮಲ್ಲಿಲ್ಲ. ಇದೇ ಶಾಲೆಯಲ್ಲಿ ಓದಿಸುವುದು ಅನಿವಾರ್ಯ. ಬೇರೆ ಕಟ್ಟಡ ನಿರ್ಮಾಣಕ್ಕೆ ಪ್ರಕ್ರಿಯೆ ಆರಂಭವಾಗಿದೆಯಂತೆ. ಆದಷ್ಟು ಬೇಗ ಉತ್ತಮ ವ್ಯವಸ್ಥೆ ಕಲ್ಪಿಸಿಕೊಡಿ' ಎಂದು ವಿದ್ಯಾರ್ಥಿಯೋರ್ವರ ತಂದೆ ಸತೀಶ್ ಆಗ್ರಹಿಸಿದರು.
ಇದನ್ನೂ ಓದಿ: ರಾಜ್ಯಕ್ಕೆ ಏಮ್ಸ್ ಮಂಜೂರು ಖಚಿತ: ಸಚಿವ ಸುಧಾಕರ್ ಮನವಿಗೆ ಕೇಂದ್ರ ಗ್ರೀನ್ ಸಿಗ್ನಲ್
ವಿದ್ಯಾರ್ಥಿನಿ ಅಂಕಿತ ಮಾತನಾಡಿ, 'ಶಾಲೆಯಲ್ಲಿ ಓದಲು ಕಷ್ಟವಾಗುತ್ತಿದೆ. ಇಲಿ, ಹೆಗ್ಗಣ ಸತ್ತು ಕೊಳೆತ ವಾಸನೆ ಬರುತ್ತಿದೆ. ಮಳೆ ನೀರು ನುಗ್ಗುತ್ತಿದೆ. ಶಿಕ್ಷಕರಿಗೂ ಕಷ್ಟವಾಗುತ್ತಿದೆ. ಹಾಗಾಗಿ ನಮಗೆ ಹೊಸ ಶಾಲೆ ಮಾಡಿಕೊಡಿ' ಎಂದು ಮನವಿ ಮಾಡಿದರು.
ಸದ್ಯ ಜಿಲ್ಲಾಡಳಿತ ನೂತನ ಕಟ್ಟಡ ನಿರ್ಮಾಣಕ್ಕೆ 95.17 ಲಕ್ಷ ರೂ.ಗಳನ್ನು ನೀಡಿದೆ. ಸರ್ಕಾರ ಇನ್ನಷ್ಟು ಹಣ ನೀಡಿ ಉತ್ತಮ ಶಾಲೆ ನಿರ್ಮಿಸಿಕೊಡಬೇಕೆಂದು ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಆಗ್ರಹಿಸಿದ್ದಾರೆ.