ಶಿವಮೊಗ್ಗ: ಸೊರಬ ತಾಲೂಕಿನ ಹೊಸಬಾಳೆಯ ಸರ್ಕಾರಿ ಪ್ರಾಥಮಿಕ ಶಾಲೆಗೆ ಈಗ 110 ವರ್ಷ. ಶತಮಾನ ಕಂಡಿದ್ದ ಈ ಸರ್ಕಾರಿ ಶಾಲೆಗೆ ಪೇಂಟಿಂಗ್ ಮಾಡಿಸುವ ಮೂಲಕ ಚಿತ್ರ ನಿರ್ಮಾಪಕ ಎಂ.ವಿ. ಕೃಷ್ಣಪ್ಪ ಹೊಸ ರೂಪ ನೀಡಿದ್ದಾರೆ.
ಹೊಸಬಾಳೆಯ ಸರ್ಕಾರಿ ಪ್ರಾಥಮಿಕ ಶಾಲೆ ಶಿವಮೊಗ್ಗ ಜಿಲ್ಲೆಯ ಗಡಿ ಭಾಗದಲ್ಲಿದೆ. ಈ ಶಾಲೆಯ ಬಗ್ಗೆ ಗ್ರಾಮಸ್ಥರಿಗೆ ಒಂದು ರೀತಿಯ ಅಸಡ್ಡೆ. ಶಾಲೆಗೆ ಪೇಂಟಿಂಗ್ ಮಾಡಿಸಿ ದಶಕಗಳೇ ಕಳೆದು ಹೋಗಿದ್ದವು. ಇದರಿಂದ ಶಾಲೆಯ ಶಿಕ್ಷಕ ಹೊಳಿಯಪ್ಪ ಅವರು ತಮ್ಮ ಶಾಲೆಗೆ ಪೇಂಟಿಂಗ್ ಮಾಡಿಸಬೇಕೆಂದು ಚಿತ್ರ ನಿರ್ಮಾಪಕ ಎಂ.ವಿ. ಕೃಷ್ಣಪ್ಪ ಅವರ ಸ್ನೇಹಿತರೊಬ್ಬರ ಬಳಿ ಮಾತನಾಡಿದ್ದರು. ಅವರು ಈ ವಿಚಾರವನ್ನು ಕೃಷ್ಣಪ್ಪ ಅವರಿಗೆ ಹೇಳಿದಾಗ ಅವರು ಶಾಲೆಯ ಅಡುಗೆ ಮನೆ, ಅಂಗನವಾಡಿ ಸೇರಿದಂತೆ ಶಾಲಾ ಆವರಣದ ಎಲ್ಲಾ ಕಟ್ಟಡಗಳಿಗೆ ಪೇಂಟ್ ಮಾಡಿಸಿದ್ದಾರೆ.
ಶಾಲಾ ಆವರಣದ ಎಲ್ಲ ಕಟ್ಟಡದ ಒಳ ಹಾಗೂ ಹೊರ ಭಾಗಕ್ಕೆ ಶಾಲೆಯವರು ಹೇಳಿದಂತೆಯೇ ಬಣ್ಣ ಮಾಡಿಸಿದ್ದಾರೆ. ಇದಕ್ಕಾಗಿ ಸುಮಾರು 2 ಲಕ್ಷ ರೂ ನೀಡಿದ್ದಾರೆ. ಬಣ್ಣ ಬಳಿದ ನಂತರ ಶಾಲೆ ಸುಂದರವಾಗಿದೆ. ಇದರಿಂದ ಮಕ್ಕಳು ಸೇರಿದಂತೆ ಶಾಲೆಯ ಎಲ್ಲ ಶಿಕ್ಷಕರಿಗೆ ಸಂತೋಷವನ್ನುಂಟು ಮಾಡಿದೆ ಎನ್ನುತ್ತಾರೆ ಶಿಕ್ಷಕರು.
ಎಂ.ವಿ.ಕೃಷ್ಣಪ್ಪ ಅವರು ಡಿಡಿ ಪಿಕ್ಚರ್ಸ್ ಪ್ರೈವೇಟ್ ಲಿಮಿಟೆಡ್ನ ಅಧ್ಯಕ್ಷರಾಗಿದ್ದು, ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೂಡಗಿಸಿಕೊಂಡಿದ್ದಾರೆ. ತಮ್ಮ ಶಾಲೆಗೆ ಬಣ್ಣ ಮಾಡಿಸಿ, ಶಾಲೆಗೆ ಹೊಸ ರೂಪ ನೀಡಿದ ಅವರಿಗೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಹಿಂದೂ ಕಾರ್ಯಕರ್ತರು ಕೈಗಳಿಗೆ ಬಳೆ ತೊಟ್ಟಿಲ್ಲ: ಸಂಸದ ಬಿ ವೈ ರಾಘವೇಂದ್ರ