ಶಿವಮೊಗ್ಗ: ಹೊರ ರಾಜ್ಯಗಳಿಂದ ಬಂದವರಿಗೆ 14 ದಿನಗಳ ಸಾಂಸ್ಥಿಕ ಕ್ವಾರೆಂಟೈನ್ ಬದಲು 7 ದಿನಗಳಿಗೆ ಇಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಆರೋಗ್ಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಇದುವರೆಗೆ ಹೊರ ರಾಜ್ಯಗಳಿಂದ ಬಂದವರಿಗೆ 14 ದಿನಗಳ ಸಾಂಸ್ಥಿಕ ಕ್ವಾರೆಂಟೈನ್ ಜಾರಿಯಲ್ಲಿತ್ತು. ಹೊಸ ಮಾರ್ಗಸೂಚಿ ಪ್ರಕಾರ ಇದನ್ನು 7 ದಿನಗಳಿಗೆ ಇಳಿಸಲಾಗಿದೆ. ಪ್ರಸ್ತುತ ವಿವಿಧ ಹಾಸ್ಟೆಲ್‍ಗಳಲ್ಲಿ 553 ಮಂದಿ ಕ್ವಾರೆಂಟೈನ್‍ನಲ್ಲಿದ್ದಾರೆ. 7 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದವರ ಆರೋಗ್ಯ ತಪಾಸಣೆ ಮಾಡಿ, ಕೈಗೆ ಸೀಲ್ ಹಾಕಿ ಹೋಮ್ ಕ್ವಾರೆಂಟೈನ್‍ಗೆ ಕಳುಹಿಸಬೇಕು. ಇದಕ್ಕಾಗಿ ಪ್ರತಿ ತಾಲೂಕಿಗೆ ನೋಡಲ್ ಅಧಿಕಾರಿಯನ್ನು ನೇಮಕ ಮಾಡಬೇಕು ಎಂದರು.
ಮುಂದಿನ ದಿನಗಳಲ್ಲಿ ಹೋಮ್ ಕ್ವಾರೆಂಟೈನ್‍ಗೆ ಒಳಗಾಗುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಅಂತಹವರ ಮೇಲೆ ನಿರಂತರ ನಿಗಾ ಇರಿಸಬೇಕು. ಹೋಮ್ ಕ್ವಾರಂಟೈನ್ ಒಳಗಾದವರ ಪಟ್ಟಿಯನ್ನು ಸಂಬಂಧಪಟ್ಟ ಪಿಡಿಒ ಹಾಗೂ ತಾಲೂಕು ಅಧಿಕಾರಿಗಳಿಗೆ ಕಳುಹಿಸಬೇಕು ಎಂದು ಹೇಳಿದರು.
ಹೆಚ್ಚು ಸೋಂಕಿತ ರಾಜ್ಯಗಳಿಂದ ಬರುವವರಿಗೆ 7 ದಿನ ಸಾಂಸ್ಥಿಕ ಕ್ವಾರೆಂಟೈನ್ ಕಡ್ಡಾಯವಾಗಿರುತ್ತದೆ. ಕಡಿಮೆ ಸೋಂಕಿತ ರಾಜ್ಯಗಳಿಂದ ಬರುವವರನ್ನು ನೇರವಾಗಿ ಹೋಮ್ ಕ್ವಾರೆಂಟೈನ್‍ಗೆ ಕಳುಹಿಸಿ ಕಟ್ಟುನಿಟ್ಟಿನ ನಿಗಾವಹಿಸಬೇಕು. ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಸಹ ಹೋಮ್ ಕ್ವಾರೆಂಟೈನ್‍ಗೆ ಒಳಪಡಿಸಬೇಕಾಗಿದೆ ಎಂದು ಅಧಿಕಾರಿಗಳಿಗೆ ತಿಳಿಸಿದರು.