ಶಿವಮೊಗ್ಗ: ಸಿದ್ದರಾಮಯ್ಯ ಹೇಳುವುದೆಲ್ಲ ಸುಳ್ಳು, ಅವರು ಹೇಳಿದ್ದು ಯಾವಾಗ ನಿಜವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಕೆ.ಎಸ್. ಈಶ್ವರಪ್ಪ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಈಶ್ವರಪ್ಪ, ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ಚುನಾವಣೆಗೆ ನಿಲ್ಲಬಾರದು ಎಂದು ಸಿದ್ದರಾಮಯ್ಯ ಹಾಗೂ ರಮೇಶ್ ಕುಮಾರ್ ಸೇರಿ ಕುತಂತ್ರ ರಾಜಕಾರಣ ಮಾಡಿದರು. ಆದರೆ ಸುಪ್ರೀಂಕೋರ್ಟ್ ತೀರ್ಪು ಚೆನ್ನಾಗಿ ಬಂದಿದೆ. ಸುಪ್ರೀಂಕೋರ್ಟ್ ಅನರ್ಹ ಶಾಸಕರಿಗೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ನೀಡಿದೆ ಎಂದರು.
ಈ ಚುನಾವಣೆಯಲ್ಲಿ ಬಿಜೆಪಿಗೆ ಯಾವುದೇ ಸಂಕಷ್ಟ, ಸಮಸ್ಯೆ ಬರಲ್ಲ. 15 ಜನರು ಗೆದ್ದು ಬರಲಿದ್ದಾರೆ. ಬಿಜೆಪಿ ಸರ್ಕಾರ ಪೂರ್ಣ ಬಹುಮತದೊಂದಿಗೆ ಸರ್ಕಾರ ನಡೆಸಲಿದೆ. ಸಿದ್ದರಾಮಯ್ಯ ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಎರಡಂಕಿ ದಾಟಲ್ಲ, ಮೋದಿ ಪ್ರಧಾನಿ ಆಗಲ್ಲ, ಬಿಜೆಪಿಗೆ ಬಹುಮತ ಬರಲ್ಲ ಅಂದ್ರು ಆದರೇನಾಯ್ತು? ಸಿದ್ದರಾಮಯ್ಯ ಹೇಳಿದ್ದು ಯಾವಾಗಲೂ ಸುಳ್ಳಾಗುತ್ತೆ, ಬಿಜೆಪಿ ಏನು ಹೇಳುತ್ತೆ ಅದು ಸತ್ಯವಾಗುತ್ತೆ ಎಂದರು.
ಉಪ ಚುನಾವಣೆಯಲ್ಲಿ ಬಿಜೆಪಿ ಆಡಳಿತ ಯಂತ್ರ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ಆರೋಪ ನಿರಾಧಾರ. ವಿರೋಧ ಪಕ್ಷದವರ ಕೆಲಸನೇ ಅದು. ಆಡಳಿತ ಪಕ್ಷದವರನ್ನು ಟೀಕೆ ಮಾಡುವುದೇ ಸಿದ್ದರಾಮಯ್ಯನವರ ಕೆಲಸ. ಸಿದ್ದರಾಮಯ್ಯ ಯಾರನ್ನು ಕೇಳದೆ 8 ಸ್ಥಾನಗಳಿಗೆ ಅಭ್ಯರ್ಥಿ ಘೋಷಣೆ ಮಾಡಿ ಸರ್ವಾಧಿಕಾರಿಯಂತೆ ಕಾಂಗ್ರೆಸ್ನಲ್ಲಿ ವರ್ತಿಸುತ್ತಿದ್ದಾರೆ.ಇನ್ನು ಉಳಿದ ಸ್ಥಾನಗಳಿಗೆ ಅಭ್ಯರ್ಥಿ ಘೋಷಣೆ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಬಿಜೆಪಿ ವಿರುದ್ದ ಆಪಾದನೆ ಮಾಡುವುದನ್ನು ಬಿಟ್ಟರೆ ಕಾಂಗ್ರೆಸ್ಗೆ ಇನ್ನೇನು ಗೊತ್ತಿಲ್ಲ. ಇನ್ನೂ ಜೆಡಿಎಸ್ನಲ್ಲಿ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಜನನೇ ಇಲ್ಲ ಎಂದು ಜೆಡಿಎಸ್ ವಿರುದ್ಧ ವ್ಯಂಗ್ಯವಾಡಿದರು. ಬಿಜೆಪಿಯಲ್ಲಿ ಚುನಾವಣೆಗೆ ಸ್ಪರ್ಧಿಸೋದಕ್ಕೆ ಕಾಂಪಿಟೇಷನ್ ಇದೆ. ಒಂದೊಂದು ಕ್ಷೇತ್ರಕ್ಕೆ ಮೂರು ನಾಲ್ಕು ಮಂದಿ ಇದ್ದಾರೆ. ಆದರೆ ನಮ್ಮನ್ನು ನಂಬಿ ಬಂದ ಕಾಂಗ್ರೆಸ್, ಜೆಡಿಎಸ್ನವರಿಗೆ ಟಿಕೆಟ್ ಕೊಟ್ಟಿದ್ದೇವೆ. ಅವರನ್ನು ಗೆಲ್ಲಿಸುವ ಜವಾಬ್ದಾರಿ, ಕರ್ತವ್ಯ ನಮ್ಮ ಮೇಲಿದೆ ಎಂದರು.
ಪ್ರಗತಿ ಪರಿಶೀಲನೆ ನಡೆಸಿದ ಈಶ್ವರಪ್ಪ:
ಇದಾದ ನಂತರ ಈಶ್ವರಪ್ಪ ಶಿವಮೊಗ್ಗದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಯ ಜೊತೆ ನಗರದಲ್ಲಿ ನಡೆಯುತ್ತಿರುವ ವಿವಿಧ ಯೋಜನೆಯ ಪ್ರಗತಿ ಪರಿಶೀಲನೆಯನ್ನು ಜಿಲ್ಲಾ ಮಾಡಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಈಶ್ವರಪ್ಪನವರು, ನಗರದ 35 ವಾರ್ಡ್ ಗಳಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿಯ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು.
ಮಳೆಯಿಂದ ಹಾಳಾದ ಸರ್ಕಾರಿ ಶಾಲೆಗಳ ದುರಸ್ಥಿಯನ್ನು ಕೇಂದ್ರ, ರಾಜ್ಯ ಹಾಗೂ ಮಹಾನಗರ ಪಾಲಿಕೆಯ ಹಣದಿಂದ ನಡೆಸಲಾಗುತ್ತಿದೆ. ಅಲ್ಲದೆ ಸರ್ಕಾರಿ ಶಾಲೆಯ ಶೌಚಾಲಯವನ್ನು ನಿರ್ಮಾಣ ಮಾಡಲಾಗುತ್ತಿದೆ. ನಗರದಲ್ಲಿ 3 ಸಾವಿರ ಆಶ್ರಯ ಮನೆಗಳ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೆ ನೆರೆ ಪರಿಹಾರಕ್ಕಾಗಿ ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ ತಲಾ 25 ಕೋಟಿ ರೂ ಬಿಡುಗಡೆಯಾಗಿದೆ. ಅಲ್ಲದೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 1.600 ಕೋಟಿ ರೂ ಬಿಡುಗಡೆ ಮಾಡಲಾಗಿದೆ. ಅಲ್ಲದೆ ನೆರೆ ಪರಿಹಾರಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 25 ಕೋಟಿ ರೂ ಬಿಡುಗಡೆಯಾಗಿದೆ ಎಂದರು. ಈ ವೇಳೆ ಜಿಲ್ಲಾಧಿಕಾರಿ ಶಿವಕುಮಾರ್, ಪಾಲಿಕೆ ಆಯುಕ್ತ ಚಿದಾನಂದ್ ಸೇರಿ ಇತರೆ ಅಧಿಕಾರಿಗಳು ಹಾಜರಿದ್ದರು.