ಶಿವಮೊಗ್ಗ: ಮೋದಿ ಅವರ ಸಾಧನೆಗಳು ಬಿಜೆಪಿ ಅಭ್ಯರ್ಥಿಗಳಿಗೆ ಶ್ರೀರಕ್ಷೆಯಾಗಲಿವೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿ.ವೈ ರಾಘವೇಂದ್ರ ಗೆಲುವು ಸಾಧಿಸುವುದು ಖಚಿತವೆಂದು ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ ಭವಿಷ್ಯ ನುಡಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ಹಲವು ವರ್ಷಗಳ ಕಾಲ ತನ್ನ ಆಡಳಿತ ನಡೆಸಿದೆ. ಆದರೆ ಯಾವ ಸಾಧನೆಯನ್ನು ಮಾಡಲಿಲ್ಲ ಎಂದು ಆರೋಪಿಸಿದರು. ಮೋದಿಯವರು ಕೇವಲ ಐದು ವರ್ಷಗಳಲ್ಲಿ ದೇಶವನ್ನು ಅಭಿವೃದ್ಧಿ ಮಾಡಿದ್ದಾರೆ. ವಿಶೇಷವಾಗಿ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಿ ಅವರ ಬದುಕು ಹಸನಾಗಿಸಿದ್ದಾರೆ. ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಮಹಿಳೆಯರಿಗೆ ವರದಾನವಾಗಿದೆ ಎಂದರು.
ಅಂಗನವಾಡಿ ಆಶಾ ಕಾರ್ಯಕರ್ತೆಯರ ವೇತನವನ್ನು ಹೆಚ್ಚಿಸಿದ ಕೀರ್ತಿ ಪ್ರಧಾನಿ ಮೋದಿಗೆ ಸಲ್ಲುತ್ತದೆ. ಮುಸ್ಲಿಂ ಮಹಿಳೆಯರಿಗೆ ಸಂಕಟವಾಗಿದ್ದ ತ್ರಿವಳಿ ತಲಾಕ್ ಅನ್ನು ರದ್ದುಪಡಿಸುವ ಮೂಲಕ ಅವರ ಕುಟುಂಬಕ್ಕೆ ಬೆಳಕು ಕೊಡಲಾಗಿದೆ. ಅಭಿವೃದ್ಧಿಯೇ ನಮ್ಮ ಮಂತ್ರ, ರಾಷ್ಟ್ರೀಯತೆ ಮತ್ತು ಸಾಧನೆ ಅಂತ ಗುಣಾತ್ಮಕ ಗುರಿಯನ್ನಿಟ್ಟುಕೊಂಡು ನಾವು ಜನರ ಬಳಿಗೆ ಹೋಗುತ್ತೇವೆ. ಆದರೆ ಕಾಂಗ್ರೆಸ್ನವರು ಯಾವ ಸಾಧನೆಯನ್ನು ಇಟ್ಟುಕೊಂಡು ಜನರ ಬಳಿ ಹೋಗುತ್ತಾರೆ ಎಂದು ಭಾರತಿ ಶೆಟ್ಟಿ ಪ್ರಶ್ನಿಸಿದರು.
ಶಿವಮೊಗ್ಗದ ಅಭಿವೃದ್ಧಿ ಬಿಜೆಪಿ ಸರ್ಕಾರದಲ್ಲಿ ಮಾತ್ರ ಆಗಿದೆ. ಮಧು ಬಂಗಾರಪ್ಪನವರು ಜಿಲ್ಲೆಗೆ ತಮ್ಮ ಸಾಧನೆ ಏನು ಎಂಬುದನ್ನು ತಿಳಿಸಬೇಕು. ಯಡಿಯೂರಪ್ಪ ಅನುಷ್ಠಾನಗೊಳಿಸಿದ್ದ ಯೋಜನೆಗಳನ್ನು ಮಧು ಉದ್ಘಾಟನೆ ಮಾಡಿದ್ದಾರೇ, ಹೊರತು ಯಾವುದೇ ಹೊಸ ಯೋಜನೆಗಳನ್ನು ತಂದಿಲ್ಲ ಎಂದರು. ನಾವು ಬಾಯಿಯಲ್ಲಿ ರೈಲು ಬಿಡುವುದಿಲ್ಲ, ನಿಜವಾದ ರೈಲನ್ನು ಜಿಲ್ಲೆಗೆ ಬಿ.ವೈ ರಾಘವೇಂದ್ರ ಅವರು ಬಿಟ್ಟಿದ್ದಾರೆ ಎಂದು ತಿಳಿಸಿದರು.
ನಂತರ ಕಾಂಗ್ರೆಸ್ ಪ್ರಣಾಳಿಕೆ ಕುರಿತು ಮಾತನಾಡಿದ ಭಾರತಿ ಶೆಟ್ಟಿ, ಕಾಂಗ್ರೆಸ್ ಪ್ರಣಾಳಿಕೆಯನ್ನು ನೋಡಿದರೆ ಭಯವಾಗುತ್ತಿದೆ. ಇಂದಿರಾ ಗಾಂಧಿ ಕಾಲದಿಂದಲೂ ಗರೀಬಿ ಹಠಾವೋ ಎಂದು ಹೇಳುತ್ತಾ ಬರುತ್ತಿದ್ದಾರೆ. ಈಗ ಅವರ ಮೊಮ್ಮಗ ರಾಹುಲ್ ಗಾಂಧಿ ಸಹ ಅದೇ ಸ್ಲೋಗನ್ ಹೇಳುತ್ತಿದ್ದಾರೆ ಎಂದು ಟೀಕಿಸಿದರು.