ಶಿವಮೊಗ್ಗ: ನಗರದ ಮೆಗ್ಗಾನ್ ಆಸ್ಪತ್ರೆಯನ್ನ ರಾಜ್ಯದ ಮಾದರಿ ಆಸ್ಪತ್ರೆಯಾಗಿ ಮಾಡುವ ಜವಾಬ್ದಾರಿ ಇಲ್ಲಿನ ವೈದ್ಯರ ಮೇಲಿದೆ. ಇದನ್ನು ಅರಿತು ವೈದ್ಯರು ಕೆಲಸ ಮಾಡಬೇಕಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವೈದ್ಯರಿಗೆ ಸಲಹೆ ನೀಡಿದ್ದಾರೆ.
ಕೋವಿಡ್-19 ಪರಿಣಾಮ ಇಲ್ಲಿನ ಡಯಾಲಿಸಿಸ್ ವಿಭಾಗವನ್ನು ಖಾಸಗಿ ಆಸ್ಪತ್ರೆಗಳಿಗೆ ವರ್ಗಾಹಿಸಲಾಗಿತ್ತು. ಇಂದು ಪುನಃ ಮೆಗ್ಗಾನ್ನಲ್ಲಿಯೇ ಡಯಾಲಿಸಿಸ್ ವಿಭಾಗ ಪ್ರಾರಂಭಿಸಲಾಯಿತು. ಬಳಿಕ ವೈದ್ಯರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಈಶ್ವರಪ್ಪ, ಜನಪ್ರತಿನಿಧಿಗಳು ಪದೇ ಪದೆ ಆಸ್ಪತ್ರೆಗೆ ಬರುತ್ತೇವೆ ಎಂದು ಬೇಸರ ಮಾಡಿಕೊಳ್ಳಬೇಡಿ. ನೀವು ಜನರಿಗೆ ಒಳ್ಳೆಯ ಸೇವೆ ನೀಡಿದರೆ, ಅದು ನಿಮ್ಮ ಕೆಲಸಕ್ಕೆ ನೀಡುವ ಗೌರವವಾಗಿದೆ. ನಿಮ್ಮ ಓದಿಗೆ ತಕ್ಕನಾದ ಸೇವೆಯನ್ನ ನೀವು ರೋಗಿಗಳಿಗೆ ನೀಡಬೇಕಿದೆ. ಮೆಗ್ಗಾನ್ ಆಸ್ಪತ್ರೆಯನ್ನ ರಾಜ್ಯದ ಮಾದರಿ ಆಸ್ಪತ್ರೆಯನ್ನಾಗಿ ಮಾಡುವ ಅವಶ್ಯಕತೆಯಿದ್ದು, ಇದಕ್ಕಾಗಿ ಒಂದು ವರ್ಷ ಬೇಕಾದರೂ ತೆಗೆದುಕೊಳ್ಳಿ ಎಂದರು.
ಹಲವು ರೋಗಿಗಳನ್ನ ಮೆಗ್ಗಾನ್ಗೆ ಕಳುಹಿಸದೆ ಬೇರೆ ಕಡೆ ಕಳುಹಿಸುತ್ತಿದ್ದಾರೆ. ಇದು ನಮ್ಮಂತಹ ಜನಪ್ರತಿನಿಧಿಗಳಿಗೂ ಹಾಗೂ ವೈದ್ಯರಿಗೂ ಶೋಭೆ ತರುವುದಿಲ್ಲ. ಮೆಗ್ಗಾನ್ ಆಸ್ಪತ್ರೆಗೆ ಬಂದರೆ ರೋಗ ವಾಸಿಯಾಗುತ್ತೆ ಎಂಬ ಮನೋಭಾವ ಬರುವಂತೆ ನೀವೆಲ್ಲಾ ಕೆಲಸ ಮಾಡಬೇಕು ಎಂದು ವೈದ್ಯರಿಗೆ ಸಲಹೆ ನೀಡಿದರು.