ಶಿವಮೊಗ್ಗ: ನಮ್ಮ ದೇಶದಲ್ಲಿ ಸಂವಿಧಾನ ಹಾಗೂ ಕೋರ್ಟ್ ಇದೆ. ಇವೆರಡು ಹೇಳಿದ್ದನ್ನು ಎಲ್ಲಾ ಪ್ರಜೆಗಳು ಕೇಳಬೇಕು ಎಂದು ಪರೋಕ್ಷವಾಗಿ ವಿರೋಧ ಪಕ್ಷಗಳಿಗೆ ಸಚಿವ ಕೆ.ಎಸ್.ಈಶ್ವರಪ್ಪ ಟಾಂಗ್ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ವಿದ್ಯಮಾನಗಳನ್ನು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಂತಾ ತರುವ ಪ್ರಯತ್ನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಕುಮಾರಸ್ವಾಮಿ ಅವರು ಮುಸಲ್ಮಾನರನ್ನು ತೃಪ್ತಿ ಪಡಿಸಲು ಸಂವಿಧಾನವನ್ನು ಮೀರಿ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನೀವೆಲ್ಲ ಸಂವಿಧಾನ ಓದಿದವರು, ಕಾನೂನು ತಿಳಿದವರು. ಯಾವಾಗಲೂ ಕೋರ್ಟ್ ತೀರ್ಪನ್ನೇ ಪ್ರಾಸ್ತಾಪ ಮಾಡುವ ನೀವೇ ಮುಸಲ್ಮಾನರಿಗೆ ಕೋರ್ಟ್ ತೀರ್ಪನ್ನು ಮೀರಬೇಡಿ ಎಂದು ಹೇಳಬಹುದಾಗಿತ್ತು. ಆದರೆ ಅದನ್ನು ಯಾರೂ ಮಾಡಿಲ್ಲ. ಧ್ವನಿವರ್ಧಕಗಳಿಂದ ಆಸ್ಪತ್ರೆಯಲ್ಲಿ ಇರುವವರಿಗೆ, ವೃದ್ಧರಿಗೆ ತೊಂದರೆಯಾಗುತ್ತದೆ ಎಂದು ನೀವು ಹೇಳದೆ ಹೋದರೆ, ನೀವೆಲ್ಲಾ ಓಟ್ ಬ್ಯಾಂಕ್ ರಾಜಕಾರಣ ಮಾಡ್ತಾ ಇದ್ದೀರಿ ಅಂತಾ ಗೊತ್ತಾಗುತ್ತದೆ ಎಂದರು.
ಕಾಂಗ್ರೆಸ್ನವರು ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ದೇಶ ಹಾಗೂ ರಾಜ್ಯದಲ್ಲಿ ಅವರನ್ನು ಜನ ತಿರಸ್ಕರಿಸಿದ್ದಾರೆ. ರಾಜ್ಯದಲ್ಲಿ ಇದೇ ರೀತಿ ನೀವು ಸಂವಿಧಾನ ಮೀರಿ ನಡೆದರೆ, ಕೋರ್ಟ್ಗೆ ಅಪಮಾನವಾಗುವ ರೀತಿ ನಡೆದುಕೊಂಡರೆ, ನಿಮಗೆ ಮುಂದಿನ ಚುನಾವಣೆಯಲ್ಲಿ ವಿರೋಧ ಪಕ್ಷದಲ್ಲಿ ಕೂರುವಷ್ಟು ಸ್ಥಾನವೂ ಸಿಗುವುದಿಲ್ಲ ಎಂದು ಕಿಡಿ ಕಾರಿದರು.
ದೇವಾಲಯ ಹಾಗೂ ಚರ್ಚ್ಗಳಲ್ಲಿ ಯಾರಿಗೂ ತೊಂದರೆ ಆಗದಂತೆ ಧ್ವನಿವರ್ಧಕ ಬಳಸುತ್ತಾರೋ ಅದೇ ರೀತಿ ನೀವು ಮಸೀದಿಯಲ್ಲಿ ಬಳಸಿ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆ ತನಕ ಧ್ವನಿವರ್ಧಕ ಬಳಸುವುದು ಬೇಡ ಎಂದು ಸುಪ್ರೀಂಕೋರ್ಟ್ ಹೇಳಿದರೂ ಸಹ ಅದನ್ನು ನೀವು ಮೀರಿ ಹೋಗುತ್ತಿದ್ದೀರಿ ಎಂದು ಕಾಂಗ್ರೆಸ್ನವರು ಯಾಕೆ ಹೇಳುತ್ತಿಲ್ಲ? ಎಂದು ಸಚಿವರು ಪ್ರಶ್ನಿಸಿದರು.
ಜನರ ತೀರ್ಪಿಗೆ ಬದ್ದ: ರಾಜ್ಯ ಸರ್ಕಾರ ಬೆಲೆ ಏರಿಕೆ ವೈಫಲ್ಯ ಮುಚ್ಚಿ ಹಾಕಿಕೊಳ್ಳಲು ಇಂತಹ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದೆ ಎಂಬ ವಿರೋಧ ಪಕ್ಷದ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಾವು ಒಳ್ಳೆಯ ಕೆಲಸ ಮಾಡುತ್ತಿದ್ದೇವೆ ಎಂದು ಎಲ್ಲಾ ಚುನಾವಣೆಯಲ್ಲಿ ಜನ ನಮ್ಮನ್ನು ಗೆಲ್ಲಿಸುತ್ತಿದ್ದಾರೆ. ಜನರ ತೀರ್ಪಿಗೆ ನಾವು ಬದ್ದ. ಬದಲಾಗಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ತೀರ್ಪಿಗೆ ಅಲ್ಲ ಎಂದರು.
ಎನ್ಐಎ ತನಿಖೆ ನಡೆಸುತ್ತಿದೆ: ಹರ್ಷ ಕೊಲೆಯಾದ ಸಂದರ್ಭದಲ್ಲಿ ಕೊಲೆಯ ಹಿಂದೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಷಡ್ಯಂತ್ರ ಇದೆ ಎಂದು ಹೇಳಿದ್ದೆ. ಸದ್ಯ ಎನ್ಐಎ ತಂಡ ತನಿಖೆ ಪ್ರಾರಂಭಿಸಿದೆ. ಈಗ ಅವರು ಸಹ ಸ್ಪಷ್ಟವಾಗಿ ಇದು ಕುತಂತ್ರದ ಕೊಲೆ ಎಂದು ಹೇಳಿದ್ದಾರೆ. ಈಗಾಲಾದರೂ ಸಹ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಯಾರಿಗೆ ಬೆಂಬಲ ನೀಡಬೇಕೆಂದು ತೀರ್ಮಾನ ಮಾಡಲಿ ಎಂದರು.
ಇದನ್ನೂ ಓದಿ: ಆಜಾನ್‌ಗೆ ಅಪಸ್ವರ.. ನಾವು ಯಾವುದೇ ಹೊಸ ಆದೇಶಗಳನ್ನು ಮಾಡಿಲ್ಲ, ಎಲ್ಲವೂ ಹಳೆಯದೇ : ಸಿಎಂ ಬೊಮ್ಮಾಯಿ