ಶಿವಮೊಗ್ಗ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಜ. 25ರಂದು ಸಾಗರ ಮತ್ತು ಶಿವಮೊಗ್ಗದಲ್ಲಿ ಬಿಜೆಪಿ ಬೃಹತ್ ಸಭೆ ನಡೆಸಲಿದೆ ಎಂದು ಉಪಮೇಯರ್ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ವಿನಾಕಾರಣ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಈಗಾಗಲೇ ಕಾಯ್ದೆ ಜಾರಿಯಾಗಿದ್ದು, ಸುಪ್ರೀಂಕೋರ್ಟ್ ಕೂಡ ಇದನ್ನು ಒಪ್ಪಿದೆ. ಆದರೂ ಕೂಡ ಕಾಂಗ್ರೆಸ್ ಸೇರಿದಂತೆ ಕೆಲವರು ಇದನ್ನು ವಿರೋಧಿಸುತ್ತಿದ್ದಾರೆ. ಆದ್ದರಿಂದ ಕಾಯ್ದೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ನಮ್ಮ ಕಾರ್ಯಕರ್ತರು ಮತಗಟ್ಟೆ ಆಧಾರದಲ್ಲಿ ಪ್ರತಿ ಮನೆ ಮನೆಗೆ ತೆರಳಿದ್ದು, ಇದೂವರೆಗೂ 79 ಸಾವಿರ ಮನೆಗಳಿಗೆ ಭೇಟಿ ನೀಡಿ ಪೌರತ್ವ ತಿದ್ದುಪಡಿ ಕಾಯ್ದೆಯ ಮಹತ್ವವನ್ನು ತಿಳಿಸಿದ್ದಾರೆ. ಮಹಿಳಾ ಮೋರ್ಚಾ ಕಾರ್ಯಕರ್ತರು ಸುಮಾರು 141 ಕಾರ್ಯಕ್ರಮ ಮಾಡಿದ್ದಾರೆ. 48 ಸಾವಿರಕ್ಕೂ ಹೆಚ್ಚು ಸಹಿ ಸಂಗ್ರಹ ಮಾಡಲಾಗಿದೆ. ಇದಲ್ಲದೇ ಪ್ರಧಾನಿ ಮೋದಿಯವರಿಗೆ ಪ್ರಬುದ್ಧರು ಪತ್ರಗಳನ್ನು ಬರೆದು ಅಭಿನಂದನೆ ಸಲ್ಲಿಸಿದ್ದಾರೆ. ಸುಮಾರು 850ಕ್ಕೂ ಹೆಚ್ಚು ಪತ್ರಗಳನ್ನು ಜಿಲ್ಲೆಯಿಂದ ಪ್ರಧಾನಿಯವರಿಗೆ ರವಾನಿಸಲಾಗಿದೆ ಎಂದರು.