ಶಿವಮೊಗ್ಗ: ವಾಜಪೇಯಿ ಬಡಾವಣೆಯ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಲೋಕಾಯುಕ್ತ ತನಿಖೆಯನ್ನು ಕೈ ಬಿಡುವ ಮೂಲಕ, ತಮ್ಮ ಬೆಂಬಲಿಗರ ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಸಚಿವ ಕೆ.ಎಸ್. ಈಶ್ವರಪ್ಪ ಯತ್ನಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಆರೋಪಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಾಜಪೇಯಿ ಬಡಾವಣೆಯ ನಿವೇಶನ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಇದರ ಬಗ್ಗೆ ನ್ಯಾಯಮೂರ್ತಿ ರವೀಂದ್ರನಾಥ್ ಅವರು ತನಿಖೆ ನಡೆಸಿದ್ದಾರೆ. ಸರ್ಕಾರಕ್ಕೆ ಈ ವರದಿ ಸಲ್ಲಿಸುವುದು ಹಾಗೂ ಸರ್ಕಾರ ಈ ಕುರಿತು ಕ್ರಮ ಕೈಗೊಳ್ಳುವುದು ಮಾತ್ರವೇ ಬಾಕಿ ಇದೆ. ಮೊನ್ನೆ ನಗರಾಭಿವೃದ್ಧಿ ಸಚಿವರು ಶಿವಮೊಗ್ಗಕ್ಕೆ ಬಂದಾಗ ಅವರ ಬಾಯಲ್ಲಿ ತನಿಖೆ ರದ್ದುಗೊಳಿಸುವುದಾಗಿ ಹೇಳಿಸುವ ಮೂಲಕ ಈಶ್ವರಪ್ಪನವರು ತಮ್ಮ ಬೆಂಬಲಿಗರನ್ನು ರಕ್ಷಿಸಿಕೊಳ್ಳಲು ಮುಂದಾಗಿದ್ದಾರೆ ಅನೋದನ್ನು ಬಿಡಿಸಿ ಹೇಳಬೇಕಿಲ್ಲ. ಅಕ್ರಮ ನಿವೇಶನ ಹಂಚಿಕೆಯಲ್ಲಿಈಶ್ವರಪ್ಪನವರ ಕೈವಾಡವೂ ಸಹ ಇದೆ ಎಂದು ಆರೋಪಿಸಿದರು.
ನಿಯಮಬಾಹಿರವಾಗಿ 142 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಲೋಕಾಯುಕ್ತ ವರದಿಯಲ್ಲಿ ತಿಳಿಸಲಾಗಿದೆ. ಬಿಜೆಪಿ ಕಾರ್ಯಕರ್ತರಿಗೆ, ಶ್ರೀಮಂತರಿಗೆ ಹಾಗೂ ಅಪ್ರಾಪ್ತರಿಗೆ ಕಾನೂನು ಬಾಹಿರವಾಗಿ ನಿವೇಶನ ಹಂಚಿಕೆ ಮಾಡಲಾಗಿದೆ. ನಿವೇಶನ ಹಂಚಿಕೆಯಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದ್ದು ಕೆ.ಎಸ್.ಈಶ್ವರಪ್ಪ ಸೇರಿದಂತೆ ಅವರ ಬೆಂಗಲಿಗರಾದ ಪಾಲಿಕೆ ಸದಸ್ಯ ಎಸ್ ಜ್ಞಾನೇಶ್ವರ್ ಹಾಗೂ ಬಿಜೆಪಿ ರೈತ ಮೊರ್ಚಾದ ಕಾರ್ಯದರ್ಶಿ ಎಸ್ ದತ್ತಾತ್ರಿ ಅವರು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಧ್ಯಕ್ಷರಾಗಿದ್ದ ಅಧಿಕಾರ ಅವಧಿಯಲ್ಲಿ ಈ ಭ್ರಷ್ಟಾಚಾರ ನಡೆದಿದೆ ಎಂದು ದೂರಿದರು.
ಲೋಕಾಯುಕ್ತ ತನಿಖೆಯಿಂದ ಭ್ರಷ್ಟಾಚಾರ ನಡೆದಿರುವುದು ಸಾಭಿತಾಗಿರುವಾಗ ತಪ್ಪಿತ್ತಸ್ಥರ ಮೇಲೆ ಕ್ರಮ ಕೈಗೊಳ್ಳದೆ ಹಗರಣದ ತನಿಖೆಯನ್ನು ರದ್ದುಪಡಿಸಲು ಮುಂದಾಗಿರುವುದು ನಾಚಿಕೆಗೆಡಿನ ಸಂಗತಿ. ಹಾಗಾಗಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ಕಾಂಗ್ರೆಸ್ ಪಕ್ಷದಿಂದ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.