ಶಿವಮೊಗ್ಗ: ಬಗರ್ ಹುಕುಂ ಅರ್ಜಿದಾರರಿಗೆ ಭೂಮಿ ಹಕ್ಕುಪತ್ರ ನೀಡಬೇಕು ಎಂದು ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಆಗ್ರಹಿಸಿದೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಜಿಲ್ಲಾಧ್ಯಕ್ಷ ಟಿ.ಚಂದ್ರಪ್ಪ, ಶಿವಮೊಗ್ಗ ಜಿಲ್ಲೆಯಲ್ಲಿ ಇತ್ಯರ್ಥ ಆಗದೇ ಲಕ್ಷಾಂತರ ಅರ್ಜಿಗಳು ಬಾಕಿ ಉಳಿದಿವೆ. ಫಾರಂ ನಂ.50, 53 ಮತ್ತು 57ರಲ್ಲಿ ಅರ್ಜಿ ಸಲ್ಲಿಸಿದವರಿಗೆ, ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಸಲ್ಲಿಸಿದ ಅರ್ಜಿಗಳು ಇನ್ನೂ ವಿಲೇವಾರಿಯೇ ಆಗಿಲ್ಲ. ಈ ಎಲ್ಲಾ ಅರ್ಜಿದಾರರಿಗೆ ಭೂಮಿಯ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಫಾರಂ ನಂ.50ರಲ್ಲಿ 7 ತಾಲೂಕುಗಳಿಂದ 1,10,739 ಅರ್ಜಿ ಸಲ್ಲಿಸಲಾಗಿದೆ. ಇದರಲ್ಲಿ ಕೇವಲ 21,654 ಕುಟುಂಬಗಳಿಗೆ ಮಾತ್ರ ಭೂಮಿ ಹಕ್ಕು ಸಕ್ರಮಗೊಳಿಸಲಾಗಿದೆ. ಇನ್ನುಳಿದಂತೆ 89,085 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಹಾಗೆಯೇ ಫಾರಂ ನಂ.53ರಲ್ಲಿ ಜಿಲ್ಲೆಯಲ್ಲಿ 1,45,601 ಕುಟುಂಬಗಳು ಅರ್ಜಿ ಸಲ್ಲಿಸಿವೆ. ಅದರಲ್ಲಿ ಕೇವಲ 18,649 ಕುಟುಂಬಗಳಿಗೆ ಮಾತ್ರ ಭೂಮಿ ಸಕ್ರಮಗೊಳಿಸಲಾಗಿದೆ.
1,25,877 ಅರ್ಜಿಗಳು ತಿರಸ್ಕರವಾಗಿವೆ ಎಂದರು. ಜೊತೆಗೆ ಬಗರ್ ಹುಕುಂ ಸಮಿತಿ ರಚಿಸದೇ, ಸರ್ಕಾರ ವಿಳಂಬ ಮಾಡುತ್ತಿದೆ. ಎಲ್ಲಾ ತಾಲೂಕುಗಳಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಭೂ ಸಕ್ರಮೀಕರಣ ಸಮಿತಿ ರಚಿಸಿ, ಬಾಕಿ ಉಳಿದಿರುವ ಅರ್ಜಿಗಳನ್ನು ಪರಿಶೀಲಿಸಿ, ಭೂಮಿ ಹಕ್ಕುಪತ್ರ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ರೇಖಾನಾಯ್ಕ, ಸಂಚಾಲಕ ಕೆ ಎಸ್ ರಾಜಪ್ಪ, ಬಸವರಾಜಪ್ಪ ಮತ್ತಿತರರು ಉಪಸ್ಥಿತರಿದ್ದರು.