ಶಿವಮೊಗ್ಗ: ಲೋಕಸಭಾ ಚುನಾವಣೆಗೆ ಈ ಬಾರಿ ಜಿಲ್ಲೆಯಿಂದ ಪಕ್ಷೇತರ ಅಭ್ಯರ್ಥಿಗಳು ಹೆಚ್ಚು ನಾಮಪತ್ರ ಸಲ್ಲಿಸಿದ್ದಾರೆ.
ಬಿಜೆಪಿಯಿಂದ ಬಿ.ವೈ.ರಾಘವೇಂದ್ರ, ಬಿಎಸ್ಪಿ ಪಕ್ಷದಿಂದ ಗುಡ್ಡಪ್ಪ ಹಾಗೂ ಪಿರಮಿಡ್ ಸ್ಪಿರಿಚುಯಲ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ಕೃಷ್ಣ ಎಂಬುವರು ಬಿಟ್ಟರೆ, ಶೇಖರ್ ನಾಯ್ಕ, ಎಸ್.ಉಮೇಶಪ್ಪ ಹಾಗೂ ಭದ್ರಾವತಿಯ ಶಶಿಕುಮಾರ್ ಗೌಡ ಎಂಬವರು ಪಕ್ಷೇತರ ಅಭ್ಯರ್ಥಿಗಳಾಗಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಇದರಲ್ಲಿ ಉಮೇಶಪ್ಪ ಹಾಗೂ ಶೇಖರ್ ನಾಯ್ಕ ಹಾಗೂ ಬಿಎಸ್ಪಿಯ ಗುಡ್ಡಪ್ಪನವರು ಪ್ರಥಮ ಬಾರಿ ಸ್ಪರ್ಧೆ ಮಾಡುತ್ತಿದ್ದಾರೆ. ಪಿರಮಿಡ್ ಸ್ಪಿರಿಚುಯಲ್ ಪಾರ್ಟಿಯು ಆಂಧ್ರ ಮೂಲದ ಪಕ್ಷವಾಗಿದ್ದು, ಆಧ್ಯಾತ್ಮಕ್ಕೆ ಹೆಚ್ಚು ಒತ್ತು ನೀಡಿದೆ. ಜನಸಾಮಾನ್ಯರಿಗೆ ಧ್ಯಾನ, ಆರೋಗ್ಯ ಹಾಗೂ ಶಾಖಾಹಾರದ ಮಹತ್ವ ತಿಳಿಸಿ ಮತಯಾಚನೆ ಮಾಡಲಾಗುವುದು ಎಂದು ಪಿರಮಿಡ್ ಪಾರ್ಟಿಯ ಅಭ್ಯರ್ಥಿ ಕೃಷ್ಣ ತಿಳಿಸಿದರು.
ಭದ್ರಾವತಿಯ ಶಶಿಕುಮಾರ್, ಕಳೆದ ಮೂರು ಲೋಕಸಭಾ ಚುನಾವಣೆ ಹಾಗೂ ಭದ್ರಾವತಿ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಸದ್ಯ ಈಗ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೆ ಅಂತ ಹೇಳಿಕೊಳ್ಳಲು ಸ್ಪರ್ಧೆ ಮಾಡುತ್ತಿಲ್ಲ. ಕ್ಷೇತ್ರದಲ್ಲಿನ ಸಮಸ್ಯೆ ಪರಿಹರಿಸಲು ಸ್ಪರ್ಧೆ ಮಾಡುತ್ತಿದ್ದೇನೆ. ನನಗೆ ಜೆಡಿಯು ಪಕ್ಷದ ವತಿಯಿಂದ ಬಿ ಫಾರಂ ಸಿಗಲಿದೆ ಎಂದು ಶಶಿಕುಮಾರ್ ಹೇಳಿದರು.
ನಾಮಪತ್ರ ವಾಪಸ್ ಪಡೆಯಲು ಇನ್ನೂ ಅವಕಾಶ ಇರುವುದರಿಂದ ಅಂತಿಮ ಕಣದಲ್ಲಿ ಯಾರು ಉಳಿಯಲಿದ್ದಾರೆ ಎಂದು ಕಾದು ನೋಡಬೇಕಿದೆ.