ಶಿವಮೊಗ್ಗ: ನಾನು ಜಗದೀಶ್ ಶೆಟ್ಟರ್ ತರ ಸಾಕು ಅಂತ ಹೇಳಲ್ಲ. ಪಕ್ಷದ ವರಿಷ್ಠರು ಹೇಳಿದ್ರೆ, ಡಿಸಿಎಂ ಆಗುತ್ತೇನೆ, ಮಂತ್ರಿ ಆಗು ಅಂದ್ರೂ ಸಹ ಆಗ್ತೇನೆ, ಇಲ್ಲ ಶಾಸಕನಾಗಿರು ಅಂದ್ರೆ ಇರುತ್ತೇನೆ. ನಾನು ಪಕ್ಷ ಹೇಳಿದಂತೆ ಕೇಳುತ್ತೇನೆ ಎಂದು ಮಾಜಿ ಸಚಿವ ಬಿಜೆಪಿಯ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಪರೋಕ್ಷವಾಗಿ ತಾವು ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದಾರೆ.
ನಗರದ ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ನನಗೆ ಖಾತೆ ಸಿಗುತ್ತದೆಯೋ ಬಿಡುತ್ತದೆಯೋ ಅದರ ಬಗ್ಗೆ ನೋವಿಲ್ಲ, ಇಂತಹದ್ದೆ ಖಾತೆ ಬೇಕು ಅಂತ ನಾನು ಎಂದೂ ಕೇಳಿಲ್ಲ. ನನಗೂ ಅನೇಕರು ಫೋನ್ ಮಾಡಿ ನೀವು ಡಿಸಿಎಂ ಅಗಬೇಕು ಅಂತ ಹೇಳಿದ್ರು, ನಾನು ಪಕ್ಷದ ಕಾರ್ಯಕರ್ತ, ಅನೇಕ ಹಿಂದುಳಿದ ವರ್ಗದ ಮಠಾಧೀಶರು ಸೇರಿದಂತೆ ಹಲವಾರು ಸ್ವಾಮೀಜಿಗಳು ಸಹ ನನಗೆ ಫೋನ್ ಮಾಡಿ ಡಿಸಿಎಂ ಆಗಿ ಅಂತ ಹೇಳಿದ್ರು, ಆದ್ರೆ ನಾನು ಪಕ್ಷ ಹೇಳಿದಂತೆ ಕೇಳುತ್ತೇನೆ ಎಂದು ತಿಳಿಸಿದರು.
ಸಿಎಂ ಬದಲಾವಣೆಯಲ್ಲಿ ಬಿಜೆಪಿಯವರಿಗೆ ಸಂತಸ, ಕಾಂಗ್ರೆಸ್ ನವರಿಗೆ ಸಂಕಟ:
ಬಿಜೆಪಿಯಲ್ಲಿನ ಅಚ್ಚರಿಯ ಬೆಳವಣಿಗೆಯಿಂದ ಕಾರ್ಯಕರ್ತರಿಗೆ ಹಾಗೂ ಹಿತೈಷಿಗಳಿಗೆ ಸಂತಸ ತಂದಿದ್ರೆ, ಇದನ್ನೇ ರಾಜಕೀಯವಾಗಿ ಲಾಭ ಪಡೆಯಲು ಹೋಗಿದ್ದ ಕಾಂಗ್ರೆಸ್ಗೆ ನಿರಾಸೆಯಾಗಿದೆ. ಮುಂದಿನ ಎರಡು ವರ್ಷದಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ದಿ ಮಾಡಿ ಚುನಾವಣೆಗೆ ಹೋಗುವವರಿದ್ದೇವೆ ಎಂದರು.
ಮುಂದಿನ ಚುನಾವಣೆಯಲ್ಲಿ ಕಾರ್ಯಕರ್ತರು, ಸಂಘಟನೆಯ ಪರಿಶ್ರಮದಿಂದ ಪೂರ್ಣ ಪ್ರಮಾಣದ ಸರ್ಕಾರ ತರುವ ಪ್ರಯತ್ನ ಮಾಡಲಾಗುವುದು. ಎಲ್ಲರಿಗೂ ಅಚ್ಚರಿಯ ರೀತಿ ನಮ್ಮ ಬಿಕ್ಕಟ್ಟನ್ನು ವರಿಷ್ಟರು ಬಂದು ನಿವಾರಿಸಿದ್ದಾರೆ. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದು ತಿಳಿಸಿದರು.
ಬೊಮ್ಮಾಯಿ ಸಿಎಂ ಆಗಿರುವುದು ರಾಜಕೀಯದ ಒಂದು ದಾಳ:
ನಾನು ಸಾವಿರಾರು ಕಾರ್ಯಕರ್ತರ ನಡುವೆ ಒಂದು ಬಿಂದು ಅಷ್ಟೇ, ಸಿಎಂ ಸ್ಥಾನಕ್ಕೆ ನನಗಿಂತ ಅನೇಕ ಹಿರಿಯರು, ಅನುಭವಸ್ಥರು ಇದ್ದಾರೆ. ಬೊಮ್ಮಯಿರವರು ಸಿಎಂ ಆಗಿರುವುದು ಒಂದು ರಾಜಕೀಯ ದಾಳವಷ್ಟೆ ಎಂದರು. ಯಡಿಯೂರಪ್ಪ ಬೊಮ್ಮಯಿಯ ಹೆಸರು ಘೋಷಿಸಿದಾಗ ನಾನೇ ಅನುಮೋದಿಸಿದೆ ಎಂದರು.
ಈಗ ಕೃಷ್ಣನ ತಂತ್ರಗಾರಿಕೆ ಇದೆ, ಮುಂದೆ ರಾಮ ರಾಜ್ಯ ಮಾಡುತ್ತೇವೆ:
ರಾಜಕೀಯ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದು ಅಲ್ಲ, ಈಗ ಕೃಷ್ಣನ ತಂತ್ರಗಾರಿಕೆ ಮಾಡಿದ್ದೇವೆ. ಮುಂದೆ ಪೂರ್ಣ ಬಹುಮತ ಬಂದ ಬಳಿಕ ರಾಮ ರಾಜ್ಯ ಮಾಡುತ್ತೇವೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾಮಗಾರಿಗಳು ನಿಲ್ಲುವುದಿಲ್ಲ, ಮುಂದೆಯೂ ಸಹ ಅಭಿವೃದ್ದಿ ಯೋಜನೆ ತರುತ್ತೇವೆ. ಬರುವ ಮುಂದಿನ ಎರಡು ವರ್ಷ ನಮಗೆಲ್ಲಾ ಸವಾಲು, ಸರಿಯಾದ ದಿಕ್ಕಿನಲ್ಲಿ ಚುನಾಯಿತ ಪ್ರತಿನಿಧಿಯಾಗಿ ಅಭಿವೃದ್ದಿ ಮಾಡಬೇಕಿದೆ ಎಂದು ಹೇಳಿದರು.
ಮಧು ಬಂಗಾರಪ್ಪ ರಾಜಕೀಯ ಆಶಾವಾದಿ:
ಮಧು ಬಂಗಾರಪ್ಪ ಕಾಂಗ್ರೆಸ್ ಸೇರುವ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, ಮಧು ಬಂಗಾರಪ್ಪ ರಾಜಕೀಯ ಆಶಾವಾದಿ. ಅವರು ಜೆಡಿಎಸ್ನಲ್ಲಿ ಇದ್ದಾಗ ಗೆಲ್ಲುತ್ತೇವೆ ಎಂದರು. ಈಗಲೂ ಅದೇ ಹೇಳುತ್ತಾರೆ. ಮಧು ಬಂಗಾರಪ್ಪಗೆ ರಾಜಕೀಯದಲ್ಲಿ ಎಂದೂ ಯಶಸ್ವಿ ಸಿಗುವುದಿಲ್ಲ. ನಮ್ಮ ಜಿಲ್ಲೆಗೆ ಸೋನಿಯಾ ಗಾಂಧಿ, ಸಿದ್ದರಾಮಯ್ಯ, ರಾಹುಲ್ ಗಾಂಧಿ ಬಂದು ಚುನಾವಣೆಗೆ ಸ್ಪರ್ಧೆ ಮಾಡಿದ್ದರೂ ಸಹ ನಾವು ಸೋಲಿಸುತ್ತೇವೆ ಎಂದರು.
ಒಂದು ವಾರದ ಒಳಗೆ ಸಚಿವ ಸಂಪುಟ:
ನಾಳೆ ಸಿಎಂ ಬಸವರಾಜ ಬೊಮ್ಮಯಿ ದೆಹಲಿಗೆ ಹೋಗುತ್ತಾರೆ. ಅಲ್ಲಿ ವರಿಷ್ಠರ ಜೊತೆ ಚರ್ಚೆ ನಡೆಸಿ, ಒಂದು ವಾರದ ಒಳಗೆ ಸಂಪುಟ ರಚನೆ ಮಾಡುತ್ತಾರೆ ಎಂದರು.