ಶಿವಮೊಗ್ಗ : ಕಲಬುರಗಿ ಪಾಲಿಕೆ ಆಯುಕ್ತರ ಪ್ರಕರಣದಲ್ಲಿ ಕಾನೂನಿನಡಿ ಕ್ರಮಕೈಗೊಳ್ಳಲಾಗುವುದು. ಕಾನೂನಿಗಿಂತ ಯಾರು ದೊಡ್ಡವರಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕಲಬುರಗಿ ಆಯುಕ್ತರ ಪ್ರಕರಣದ ಸಂಪೂರ್ಣ ಮಾಹಿತಿ ನನ್ನ ಬಳಿ ಇಲ್ಲ. ಮಾಹಿತಿ ಪಡೆದು ಪ್ರತಿಕ್ರಿಯಿಸುತ್ತೇನೆ ಎಂದರು.
ಎಸಿಬಿ ದಾಳಿ ನಿರಂತರ ಪ್ರಕ್ರಿಯೆ : ಎಸಿಬಿ ದಾಳಿಯು ನಿರಂತರ ಪ್ರಕ್ರಿಯೆಯಾಗಿದೆ. ಈ ದಾಳಿ ನಡೆಸಲು ಅಧಿಕಾರಿಗಳು ಸಾಕಷ್ಟು ಶ್ರಮವಹಿಸಿ ಸಾಕ್ಷಿ, ದಾಖಲೆ ಸಂಗ್ರಹ ಮಾಡುತ್ತಾರೆ. ಇದರಿಂದ ಯಾರ ಮೇಲೂ ಸುಮ್ಮನೆ ರೇಡ್ ಮಾಡಲು ಸಾಧ್ಯವಿಲ್ಲ. ಎಸಿಬಿ ಅಧಿಕಾರಿಗಳು ಅವರ ಕೆಲಸವನ್ನು ಮಾಡುತ್ತಿರುತ್ತಾರೆ ಎಂದು ಇದೇ ವೇಳೆ ಸಚಿವರು ಹೇಳಿದರು.
ಲೋಕಾಯುಕ್ತ ಹಾಗೂ ಎಸಿಬಿಯನ್ನು ಒಂದುಗೂಡಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಲೋಕಾಯುಕ್ತ ಹಾಗೂ ಎಸಿಬಿ ಪ್ರತ್ಯೇಕವಾಗಿಯೇ ಕೆಲಸ ನಿರ್ವಹಿಸುತ್ತಿವೆ ಎಂದರು.
ಬಳ್ಳಾರಿಯಲ್ಲಿ ಎಫ್‌ಎಸ್‌ಎಲ್ ಲ್ಯಾಬ್ ಸ್ಥಾಪನೆ ಮಾಡಲಾಗಿದೆ. ಶಿವಮೊಗ್ಗದಲ್ಲೂ ಸಹ ಎಫ್‌ಎಸ್‌ಎಲ್ ಲ್ಯಾಬ್ ಸ್ಥಾಪಿಸುವ ಪ್ರಸ್ತಾಪವಿದೆ. ಮುಂದಿನ ದಿನಗಳಲ್ಲಿ ಇದು ಸಾಧ್ಯವಿದೆ. ಅಲ್ಲದೆ ರಾಜ್ಯದಲ್ಲಿ ಇರುವ ಲ್ಯಾಬ್‌ಗಳನ್ನು ಬಲಪಡಿಸುವ ಆಲೋಚನೆ ಇದೆ. ಈ ಲ್ಯಾಬ್‌ಗಳಿಂದ ಬಾಕಿ ಇರುವ ಪ್ರಕರಣಗಳನ್ನು ಬೇಗ ಬಗೆಹರಿಸಲು ಸಾಧ್ಯವಾಗುತ್ತದೆ ಎಂದು ಗೃಹ ಸಚಿವರು ತಿಳಿಸಿದರು.
ಇದನ್ನೂ ಓದಿ: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಆರೋಪ: ಕಲಬುರಗಿಯ ಐಎಎಸ್ ಅಧಿಕಾರಿ ಸ್ಪಷ್ಟನೆ ಹೀಗಿದೆ..