ಶಿವಮೊಗ್ಗ: 'ಏಸೂರು ಕೊಟ್ಟರೂ ಈಸೂರು ಕೊಡೆವು' ಎಂದು ಭಾರತದಲ್ಲಿ ಮೊಟ್ಟಮೊದಲ ಸ್ವಾತಂತ್ರ್ಯ ಘೋಷಿಸಿಕೊಂಡ ಹಳ್ಳಿ ಈಸೂರು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದ ಜನರು ಬ್ರಿಟಿಷರಿಗೆ ಸೆಡ್ಡು ಹೊಡೆದು, ಅವರೊಂದಿಗೆ ಕಾದಾಡಿ ವೀರ ಮರಣ ಹೊಂದಿದ್ದರು. ಇವತ್ತಿನವರೆಗೂ ಈ ಗ್ರಾಮ ವೀರಪುತ್ರರ ನಾಡು ಎಂದೇ ಕರೆಸಿಕೊಳ್ಳುತ್ತದೆ.
ಅದು ಭಾರತವನ್ನು ಬ್ರಿಟಿಷರ ದಾಸ್ಯದಿಂದ ಹೊರತರುವ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ್ದ ಹೊತ್ತು. ಅದೆಷ್ಟೋ ಮಹನೀಯರು ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಆದರೆ, ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ವಾತಂತ್ರ್ಯ ಗ್ರಾಮವೆಂದು ಘೋಷಿಸಿಕೊಂಡು ದಿಟ್ಟತನ ತೋರಿದ ನಾಡು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈ ಪುಟ್ಟ ಗ್ರಾಮ ಈಸೂರು.
'ಏಸೂರು ಕೊಟ್ಟರೂ ಈಸೂರು ಕೊಡೆವು' ಎಂಬ ಧ್ಯೇಯ ವಾಕ್ಯದೊಂದಿಗೆ ಈ ಗ್ರಾಮದ ಜನತೆ 1942 ಸೆಪ್ಟೆಂಬರ್ 27ರಂದು ವೀರಭದ್ರೇಶ್ವರ ದೇವಾಸ್ಥಾನದಲ್ಲಿ ದೇಶದ ಬಾವುಟ ಹಾರಿಸಿದ್ದರು. ಬ್ರಿಟಿಷ್ ಕಂದಾಯ ಅಧಿಕಾರಿಗಳು ಕಂದಾಯ ಕಟ್ಟುವಂತೆ ಊರಿನ ಗ್ರಾಮಸ್ಥರನ್ನು ಕೇಳಿದಾಗ, ಅವರ ಲೆಕ್ಕದ ಪುಸ್ತಕವನ್ನು ಕಸಿದುಕೊಂಡು ಗಾಂಧಿ ಟೋಪಿ ಧರಿಸುವಂತೆ ಹೇಳಿದ್ರು. ಅವರು ಧರಿಸದೇ ವಾಪಸ್ ಹೋಗಿ, ಶಿಕಾರಿಪುರದ ಹವಾಲ್ದಾರ್ಗೆ ದೂರು ನೀಡಿದ್ರು. ಈ ವೇಳೆ ನಡೆದ ಹಿಂಸಾಚಾರದಲ್ಲಿ ಅನೇಕ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಾರೆ. ಹೀಗಾಗಿ, ಗ್ರಾಮದಲ್ಲಿ ಸ್ವಾತಂತ್ರ್ಯ ಕಿಚ್ಚು ಮತ್ತಷ್ಟು ಹೆಚ್ಚಾಗುತ್ತದೆ. ಬ್ರಿಟಿಷರಿಂದ ತಾವು ಸ್ವಾತಂತ್ರ್ಯ ಎಂದು ಗ್ರಾಮದಲ್ಲಿ ಘೋಷಣೆ ಮಾಡಿಕೊಳ್ಳಲಾಗುತ್ತದೆ.
ಇದೀಗ ಈಸೂರು ಗ್ರಾಮದಲ್ಲಿ ನಾವು ಹುಟ್ಟಿರುವುದೇ ನಮ್ಮ ಪುಣ್ಯ ಎನ್ನುತ್ತಾರೆ ಇಲ್ಲಿನ ಜನರು. ಸ್ವಾತಂತ್ರ್ಯ ಬಂದು 50 ವರ್ಷಗಳ ನಂತ್ರ ನಮ್ಮನ್ನಾಳುವ ಸರ್ಕಾರಗಳು ಈಸೂರು ಗ್ರಾಮದಲ್ಲಿ ಹೆಸರಿಗೆ ಸ್ಮಾರಕ ನಿರ್ಮಾಣ ಮಾಡಿವೆ. ಒಂದು ಧ್ವಜಸ್ತಂಭ ನಿರ್ಮಾಣ ಮಾಡಿದೆ. ಅದರಲ್ಲಿ ಏಸೂರು ಕೊಟ್ಟರು ಈಸೂರು ಕೊಡೆವು ಎಂದು ಗ್ರಾಮದವರ ಘೋಷಣಾ ವಾಕ್ಯವನ್ನು ಹಾಕಲಾಗಿದೆ. ಹಾಗೆಯೇ ಸ್ಮಾರಕ ಭವನದ ಮುಂದೆ ಗಲ್ಲು ಶಿಕ್ಷಗೆ ಒಳಗಾದವರ ಹೆಸರನ್ನು ಕೆತ್ತಿಸಲಾಗಿದೆ. ಇಷ್ಟು ಬಿಟ್ಟರೆ, ಬೇರೆ ಯಾವುದೇ ಕೆಲಸವನ್ನು ಸರ್ಕಾರ ಮಾಡಿಲ್ಲ. ಶಿವಪುರದ ಹೋರಾಟಕ್ಕಿಂತ ಮೊದಲು ಹೋರಾಟ ನಡೆಸಿದ ಈಸೂರು ಗ್ರಾಮದಲ್ಲಿ ದೊಡ್ಡದಾದ ಸ್ಮಾರಕ ನಿರ್ಮಿಸಿ, ಹೋರಾಟಗಾರರ ಮಾಹಿತಿ ನೀಡುವ ಒಂದು ಪ್ರವಾಸಿ ತಾಣವನ್ನಾಗಿಸುವ ಕೆಲಸ ಆಗಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ಈಸೂರಿನ ಹೋರಾಟ ಭಾರತದ ಚರಿತ್ರೆಯಲ್ಲಿ ಹಾಗೆಯೇ ಉಳಿದುಕೊಂಡಿದೆ. ಸ್ವಾತಂತ್ರ್ಯ ಹೋರಾಟದ ಕಿಚ್ಚು ಸ್ವಾಭಿಮಾನ, ದೇಶಭಿಮಾನ, ಶಾಂತಿ - ಕ್ರಾಂತಿ ಎರಡು ಚಿಂತೆಗಳ ಮೂಲಕ ಬ್ರಿಟಿಷರ ಆಡಳಿತಕ್ಕೆ ವಿರುದ್ಧವಾಗಿ ಮೊಟ್ಟಮೊದಲ ಬಾರಿಗೆ ಸ್ವಾತಂತ್ರ್ಯ ಘೋಷಿಸಿಕೊಂಡ ವೀರಪುತ್ರರ ನಾಡು ಈಸೂರಿನ ಅಭಿವೃದ್ಧಿಗೆ ಸರ್ಕಾರ ಶ್ರಮಿಸಬೇಕಿದೆ.
ಓದಿ: ರಾಯಣ್ಣನ ಪುತ್ಥಳಿ ಅನಾವರಣಕ್ಕೆ ಸಿದ್ದರಾಮಯ್ಯ ಬರಬೇಕೆಂದು ಪಟ್ಟು ಹಿಡಿದ ಗ್ರಾಮಸ್ಥರು: ಮುಂದೇನಾಯ್ತು?