ಶಿವಮೊಗ್ಗ: ರಾಜ್ಯದಲ್ಲಿ ಹಿಂದೆ ಜಾರಿಗೆ ತಂದಿದ್ದ ಭೂ ಕಬಳಿಕೆ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಚಿಂತನೆ ನಡೆಸಿದ್ದು, ಈ ನಿಟ್ಟಿನಲ್ಲಿ ಚರ್ಚೆ ಪ್ರಾರಂಭವಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಯ್ದೆ ತಿದ್ದುಪಡಿಯ ಬಗ್ಗೆ ಸರ್ಕಾರ ಚರ್ಚೆಗೆ ಮುಂದಾಗಿದೆ. ಈ ಕಾಯ್ದೆಯನ್ನು ನಗರ ಭಾಗದ ಭೂಗಳ್ಳರ ಹಾವಳಿ ತಪ್ಪಿಸಲು ಜಾರಿಗೆ ತರಲಾಗಿತ್ತು. ಆದರೆ ಈಗ ಅದನ್ನು ರೈತ ತನ್ನ ಹೊಟ್ಟೆಪಾಡಿಗೆ ಉಳುಮೆ ಮಾಡಲು ಅರಣ್ಯ ಪ್ರದೇಶ, ಕಂದಾಯ ಭೂಮಿಯನ್ನು ಬಳಸಿಕೊಂಡರೆ, ನಗರ ಪ್ರದೇಶದ ಭೂ ಕಬಳಿಕೆದಾರನ ವಿರುದ್ಧ ಹಾಕುವ ಕೇಸ್ ಅನ್ನು ರೈತನ ಮೇಲೂ ಹಾಕಲಾಗುತ್ತಿದೆ. ಇದಕ್ಕಾಗಿ ಬೆಂಗಳೂರಿನಲ್ಲಿ ವಿಶೇಷ ನ್ಯಾಯಾಲಯವನ್ನು ಸಹ ತೆರೆಯಲಾಗಿದೆ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 11,725 ಜನರ ವಿರುದ್ಧ ಅರಣ್ಯ ಇಲಾಖೆ ನೋಟಿಸ್ ಜಾರಿ ಮಾಡಿದೆ. ಇದರಿಂದ ಬಡ ರೈತರು ಸಹ ಬೆಂಗಳೂರಿನ ಕೋರ್ಟ್ ಗೆ ಅಲೆದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಿಂದ ರೈತರನ್ನು ಹೊರತರಲು ಸರ್ಕಾರ ಚಿಂತನೆ ನಡೆಸಿದೆ. ಈ ಕಾಯ್ದೆ ತಿದ್ದುಪಡಿಯಿಂದ ಮಲೆನಾಡಿನ ರೈತರಿಗೆ ಅನುಕೂಲವಾಗಲಿದೆ ಎಂದು ಸಂಸದ ತಿಳಿಸಿದರು.
ತಮ್ಮ ಸಹೋದರ ವಿಜಯೇಂದ್ರ ವಿರುದ್ದ ಬರೆದ ಪತ್ರದ ಬಗ್ಗೆ ಪ್ರತಿಕ್ರಿಯಿಸಿದ ಬಿ ವೈ ರಾಘವೇಂದ್ರ, ಅದು ಒಂದು ನಕಲಿ ಪತ್ರವಾಗಿದೆ. ಈ ಬಗ್ಗೆ ಪಕ್ಷದ ವರಿಷ್ಟರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.