ಶಿವಮೊಗ್ಗ : ಹುಣಸೋಡು ಹಾಗೂ ಚಿಕ್ಕಬಳ್ಳಾಪುರ ಕಲ್ಲು ಕ್ವಾರಿ ಸ್ಫೋಟ ಪ್ರಕರಣಗಳನ್ನು ಸಿಬಿಐಗೆ ವಹಿಸಬೇಕು ಎಂದು ಮಾಜಿ ಸಚಿವ ಕಿಮ್ಮನೇ ರತ್ನಾಕರ್ ಸರ್ಕಾರವನ್ನು ಒತ್ತಾಯಿಸಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯ ಹುಣಸೋಡು ಹಾಗೂ ಚಿಕ್ಕಬಳ್ಳಾಪುರ ಕಲ್ಲು ಕ್ವಾರಿ ಸ್ಫೋಟ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ನೀಡಬೇಕು ಎಂದು ಒತ್ತಾಯಿಸಿದರು. ಈ ಎರಡು ಸ್ಫೋಟ ಪ್ರಕರಣದಲ್ಲಿ 12 ಜನ ಸಾವನ್ನಪ್ಪಿದ್ದಾರೆ. ಈ ಎರಡು ಪ್ರಕರಣದಲ್ಲಿ ಬಿಜೆಪಿಯ ಪ್ರಮುಖರು ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.
ಚಿಕ್ಕಬಳ್ಳಾಪುರ ಸ್ಫೋಟದ ತನಿಖೆಯನ್ನು ಸಿಐಡಿಗೆ ನೀಡಿರುವುದಕ್ಕೆ ನನ್ನ ವಿರೋಧವಿದೆ. ಸರ್ಕಾರ ಈ ಎರಡೂ ಸ್ಫೋಟದ ತನಿಖೆಯನ್ನು ಸಿಬಿಐಗೆ ನೀಡಬೇಕು. ಜೊತೆಗೆ ಕಾರ್ಮಿಕರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಶಿವಮೊಗ್ಗ ಹುಣಸೋಡು ಪ್ರಕರಣವನ್ನು ಸಿಬಿಐಗೆ ನೀಡದೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದಾರೆ.
ಯಾಕೆ ಅಂದರೆ ಸಿಬಿಐ ತನಿಖೆ ಮಾಡಿಸಿದರೆ, ಬಿಜೆಪಿಯವರ ಮೇಲೆ ಆಪಾದನೆ ಬರುತ್ತೆ ಎನ್ನುವ ಉದ್ದೇಶದಿಂದ. ಹಾಗಾಗಿ, ರಾಜ್ಯದ ಜನ ಬಿಜೆಪಿ ದುರಾಡಳಿತದ ವಿರುದ್ಧ ದಂಗೆ ಎಳಬೇಕಾಗುತ್ತೆ ಹಾಗೂ ಕಾಂಗ್ರೆಸ್ ಸಹ ರಾಜ್ಯಾದ್ಯಂತ ಪ್ರತಿಭಟನೆ ನಡೆಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.