ಶಿವಮೊಗ್ಗ: ಫೆಬ್ರವರಿ 24 ಮತ್ತು 25ರಂದು ನಡೆಯಲಿರುವ ಬೃಹತ್ ಉದ್ಯೋಗ ಮೇಳದಲ್ಲಿ ಪ್ರಮುಖ ಕಂಪನಿಗಳು ಭಾಗವಹಿಸಲಿದ್ದು, ಈಗಾಗಲೇ 102 ಕಂಪನಿಗಳು ಹೆಸರು ನೋಂದಾಯಿಸಿವೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ತಿಳಿಸಿದ್ದಾರೆ.
ಉದ್ಯೋಗ ಮೇಳದ ಸಿದ್ಧತೆ ಕುರಿತು ಮಾಹಿತಿ ನೀಡಿ ಮಾತನಾಡಿದ ಅವರು, ಈವರೆಗೆ 5820 ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದು, ಕೊನೆಯ ಹಂತದವರೆಗೂ ಆನ್‍ಲೈನ್‍ನಲ್ಲಿ ಹೆಸರು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ. ಇದುವರೆಗೆ ಹೆಸರು ನೋಂದಾಯಿಸಿರುವ 102 ಕಂಪನಿಗಳ ಪೈಕಿ 32 ಸಾಫ್ಟ್ವೇರ್, 12 ಉತ್ಪಾದನಾ ವಲಯದ ಕಂಪನಿಗಳು, 53 ಸೇವಾ ಕ್ಷೇತ್ರ ಹಾಗೂ 5 ಕೃಷಿ ಆಧಾರಿತ ಕಂಪನಿಗಳು ಸೇರಿವೆ. 150 ಕ್ಕೂ ಅಧಿಕ ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕಂಪನಿಗಳ ಆವಶ್ಯಕತೆಗಳ ಮಾಹಿತಿಗಳನ್ನು ಉದ್ಯೋಗ ಮೇಳದಲ್ಲಿ ಎಲ್‍ಇಡಿ ಪರದೆಗಳಲ್ಲಿ ಪ್ರದರ್ಶಿಸಲಾಗುವುದು. ಇದರಿಂದ ಅಭ್ಯರ್ಥಿಗಳು ನೇರವಾಗಿ ಸಂದರ್ಶನ ಎದುರಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಬಹುತೇಕ ಎಲ್ಲಾ ಇಲಾಖೆಗಳಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆದು ಕಾರ್ಯಕ್ರಮ ಅನುಷ್ಟಾನದ ಹಂತದಲ್ಲಿದೆ. ಫಲಾನುಭವಿಗಳ ಆಯ್ಕೆ ಮಾಡದೇ ಇರುವ ಇಲಾಖೆಗಳು ತಕ್ಷಣ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿ ವರದಿ ನೀಡಬೇಕು. ಫಲಾನುಭವಿಗಳಿಗೆ ಬ್ಯಾಂಕ್ ಮೂಲಕ ಸಬ್ಸಿಡಿ ನೀಡುವ ಯೋಜನೆ ಹೊಂದಿರುವ ನಿಗಮ ಮಂಡಳಿಗಳು ಫೆಬ್ರವರಿ ಅಂತ್ಯದ ಒಳಗಾಗಿ ಫಲಾನುಭವಿಗಳ ಪಟ್ಟಿಯನ್ನು ಬ್ಯಾಂಕ್‍ಗಳಿಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಗುರಿ ಸಾಧಿಸದ ಇಲಾಖೆಗಳಿಗೆ ನೊಟೀಸ್: ಎಸ್‍ಸಿಪಿ/ಟಿಎಸ್‍ಪಿ ಯೋಜನೆಯಡಿ ನಿಗದಿತ ಗುರಿಯನ್ನು ಸಾಧಿಸದಿದ್ದರೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಯಾಗುತ್ತಾರೆ. ಜನವರಿ ಕೊನೆಯ ಒಳಗೆ ನಿಗದಿತ ಗುರಿಯನ್ನು ಸಾಧಿಸದಿರುವ ಇಲಾಖೆಗಳಿಗೆ ಕಾರಣ ಕೇಳಿ ನೊಟೀಸ್ ಜಾರಿಗೊಳಿಸಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಯೋಜನೆ ಅನುಷ್ಟಾನ ಮಂದಗತಿಯಲ್ಲಿದ್ದು, ತ್ವರಿತವಾಗಿ ಅನುಷ್ಟಾನಗೊಳಿಸುವಂತೆ ಎಂದು ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.
ಮಾರ್ಚ್ 04ರಿಂದ ಆರಂಭವಾಗಲಿರುವ ದ್ವಿತೀಯ ಪಿಯುಸಿ ಪರೀಕ್ಷೆ ಅತ್ಯಂತ ಪಾರದರ್ಶಕವಾಗಿ ಯಾವುದೇ ಅಕ್ರಮಗಳಿಗೆ ಅವಕಾಶವಿಲ್ಲದಂತೆ ಕಟ್ಟುನಿಟ್ಟಿನಿಂದ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಇದೇ ಸಂದರ್ಭದಲ್ಲಿ ತಿಳಿಸಿದರು. ಯಾವುದೇ ಪರೀಕ್ಷಾ ಅವ್ಯವಹಾರಗಳಿಗೆ ಅವಕಾಶವಿಲ್ಲದಂತೆ ನೋಡಿಕೊಳ್ಳಬೇಕು. ಪರೀಕ್ಷಾ ಕೊಠಡಿಯೊಳಗೆ ವಿದ್ಯಾರ್ಥಿಗಳು ಮಾತ್ರವಲ್ಲದೆ ಪರೀಕ್ಷಾ ಮೇಲ್ವಿಚಾರಕರು ಸಹ ಮೊಬೈಲ್ ಸೇರಿದಂತೆ ಯಾವುದೇ ಇಲೆಕ್ಟ್ರಾನಿಕ್ ವಸ್ತುಗಳನ್ನು ಒಯ್ಯಬಾರದು. ಪ್ರತಿ ಕೊಠಡಿಯಲ್ಲಿ ಗಡಿಯಾರ ವ್ಯವಸ್ಥೆ ಮಾಡಬೇಕು. ಪರೀಕ್ಷಾ ಕೇಂದ್ರಗಳ 200ಮೀಟರ್ ಸುತ್ತಮುತ್ತ ಪ್ರತಿಬಂಧಕಾಜ್ಞೆ ವಿಧಿಸಲಾಗುವುದು. ಪರೀಕ್ಷಾ ದಿನಗಳಂದು ಬೆಳಗ್ಗೆ 7.30ರಿಂದ ಸಂಜೆ 4ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪರೀಕ್ಷಾ ಕೇಂದ್ರದ ಮುಖ್ಯ ದ್ವಾರದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ, ಅನಧಿಕೃತ ವ್ಯಕ್ತಿಗಳು ಪ್ರವೇಶಿಸದಂತೆ ಎಚ್ಚರಿಕೆ ವಹಿಸಬೇಕು. ಪ್ರಶ್ನೆ ಪತ್ರಿಕೆಗಳನ್ನು ಖಜಾನೆಯಿಂದ ಪಡೆದ ಬಳಿಕ ಪರೀಕ್ಷಾ ಕೇಂದ್ರ ತಲುಪುವವರೆಗೆ ನಡುವೆ ಎಲ್ಲಿಯೂ ನಿಲ್ಲಿಸಬಾರದು. ಸಿಸಿಟಿವಿ ಸಮ್ಮುಖದಲ್ಲಿ ಮಾತ್ರ ಪ್ರಶ್ನೆ ಪತ್ರಿಕೆಗಳನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸಬೇಕು. ಪ್ರಶ್ನೆ ಪತ್ರಿಕೆ ಸಾಗಿಸುವ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಲಾಗುವುದು. ಪರೀಕ್ಷೆ ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿರುವುದು ಕಂಡು ಬಂದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಪರೀಕ್ಷೆ ವಿವರ: ಜಿಲ್ಲೆಯಲ್ಲಿ ಈ ವರ್ಷ ಒಟ್ಟು 19,748 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಇದರಲ್ಲಿ 8620 ವಿದ್ಯಾರ್ಥಿಗಳು ಹಾಗೂ 11,128 ವಿದ್ಯಾರ್ಥಿನಿಯರು ಇದ್ದಾರೆ. ಇವರಲ್ಲಿ ಕಲಾ ವಿಭಾಗದಲ್ಲಿ 5808, ವಾಣಿಜ್ಯ 7490 ಮತ್ತು ವಿಜ್ಞಾನ ವಿಭಾಗದಲ್ಲಿ 6451 ವಿದ್ಯಾರ್ಥಿಗಳಿದ್ದಾರೆ. ಸರ್ಕಾರಿ ಶಾಲೆಯಲ್ಲಿ 10,911, ಅನುದಾನಿತ 2905 ಮತ್ತು ಅನುದಾನ ರಹಿತ ಕಾಲೇಜುಗಳಲ್ಲಿ 5758 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.