ಶಿವಮೊಗ್ಗ : ಸೋಮವಾರ ವಿವಿಧ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ಗೆ ಯಾರು ಬೆಂಬಲ ನೀಡಬಾರದು ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂದ್ ಮಾಡುವ ಅಗತ್ಯವಿಲ್ಲ. ರೈತರ ಸಮಸ್ಯೆಗಳನ್ನು ಬಗೆಹರಿಸಿ ಮಾತನಾಡಲು ಕರೆದಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಬಂದ್ಗೆ ಕರೆ ಕೊಡುವುದು ಸರಿಯಲ್ಲ ಎಂದರು.
ಇಂದಿನಿಂದ ಮೂರು ದಿನ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸ ಮಾಡಿ ಅನೇಕ ಅಭಿವೃದ್ಧಿ ಕೆಲಸಗಳಿಗೆ ಉದ್ಘಾಟನೆ ಮಾಡಲಿದ್ದೇನೆ ಎಂದರು. ಈ ಬಾರಿಯ ಅಧಿವೇಶನ ಯಶಸ್ವಿಯಾಗಿ ನಡೆಯಿತು. ಕಾಂಗ್ರೆಸ್ನವರು ಕೇಳಿದ ಪ್ರಶ್ನೆಗಳಿಗೂ ಸಹ ಉತ್ತರ ಪಡೆಯಲು ಸಿದ್ಧವಿರಲಿಲ್ಲ. ಆರೋಗ್ಯ ಸಚಿವರು ಕೋವಿಡ್ ಬಗ್ಗೆ ಉತ್ತರ ನೀಡಲು ಸಿದ್ದರಿದ್ದರು. ಅದನ್ನ ಕೇಳದೆ ಬಾಯ್ ಕಾಟ್ ಮಾಡಿ, ಒಂದು ದಿನ ಸೈಕಲ್ನಲ್ಲಿ, ಒಂದು ದಿನ ಆಟೋರಿಕ್ಷಾದಲ್ಲಿ ಬಂದರು.
ಒಂದು ವಿರೋಧ ಪಕ್ಷ ಯಾವ ರೀತಿ ನಡೆದುಕೊಳ್ಳಬೇಕು, ಆ ರೀತಿ ನಡೆದುಕೊಳ್ಳದೆ ಅಧಿವೇಶನದ ಒಳ್ಳೇ ಸಮಯವನ್ನು ವಿನಾಕಾರಣ ಸತ್ಯಾಗ್ರಹ ಮಾಡಿ ಕಾರ್ಯ ಕಲಾಪ ನಡೆಯದಂತೆ ಅಡ್ಡಿಪಡಿಸಿದರು. ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಅವರು ಮಾಡಿದಂತಹದ್ದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ದ್ರೋಹ.
ಹಾಗಾಗಿ, ಇದನ್ನು ಯಾರು ಸಹಿಸಿಕೊಳ್ಳಲು ಸಾಧ್ಯವಿಲ್ಲ. ರಾಜ್ಯದ ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಸಮಯ ಬಂದಾಗ ತಕ್ಕ ಪಾಠ ಕಳಿಸುತ್ತಾರೆ ಎಂದರು. ಬೆಲೆ ಏರಿಕೆ ವಿಚಾರ ಇಟ್ಟುಕೊಂಡು ಈ ರೀತಿ ಮಾಡುವುದು ಸರಿಯಲ್ಲ. ಹಾಗೂ ಲೋಕಸಭಾ ಸ್ಪೀಕರ್ ಬಂದಾಗ ಗೌರವಯುತವಾಗಿ ನಡೆದುಕೊಳ್ಳದೆ ಬಾಯ್ ಕಾಟ್ ಮಾಡಿರುವುದು ಪ್ರತಿಪಕ್ಷಕ್ಕೆ ಹೇಗೆ ಶೋಭೆ ತರುತ್ತದೆ? ಎಂದು ಬಿಎಸ್ವೈ ಪ್ರಶ್ನಿಸಿದರು.
ಅವರು ಡೆಸ್ಪರೇಟ್ ಆಗಿ ಯಾವುದೇ ಅವಕಾಶ ಸಿಗುವುದಿಲ್ಲ ಎಂದು ಇದ್ದಾರೆ. ಹಾಗೂ ಮುಂದಿನ ಚುನಾವಣೆಯಲ್ಲಿ ಸೋಲು ನಿಶ್ಚಿತ ಎಂಬ ಭಯದಿಂದ ಈ ರೀತಿ ಮಾಡುತ್ತಿದ್ದಾರೆ. ಜನರು ತಕ್ಕಪಾಠ ಕಳಿಸುತ್ತಾರೆ ಎಂದರು. ಉತ್ತಮ ಶಾಸಕ ಪ್ರಶಸ್ತಿ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದ ಜನರಿಗೆ ಹಾಗೂ ಏಳು ಬಾರಿ ಶಾಸಕನಾಗಿ ಮಾಡಿದ ಶಿಕಾರಿಪುರದ ಜನರಿಗೆ ಈ ಗೌರವ ಸಲ್ಲಬೇಕು. ಎಲ್ಲರಿಗೂ ಋಣಿಯಾಗಿರುತ್ತೇನೆ ಎಂದರು.
ಇದನ್ನೂ ಓದಿ: ಸೆ.17 ರಿಂದ ಮೂರು ದಿನಗಳ ಕಾಲ ಮಾಜಿ ಸಿಎಂ ಬಿಎಸ್ವೈರಿಂದ ಜಿಲ್ಲಾ ಪ್ರವಾಸ..!