ಶಿವಮೊಗ್ಗ: ಕೋವಿಡ್-19 ತಡೆಗಟ್ಟಲು ವಿಧಿಸಲಾಗಿದ್ದ ಲಾಕ್‌ಡೌನ್‌ನಿಂದ ಆಗಿರುವ ನಷ್ಟ ಅಷ್ಟಿಷ್ಟಲ್ಲ. ಇಡೀ ವಿಶ್ವದ ಆರ್ಥಿಕತೆಗೆ ಮಹಾ ಹೊಡೆತ ನೀಡಿರುವ ಕಿಲ್ಲರ್ ಕೊರೊನಾ ಅಟ್ಟಹಾಸ ಮುಂದುವರಿಯುತ್ತಲೇ ಇದೆ. ಇತ್ತ ಶಿವಮೊಗ್ಗದಲ್ಲಿ ಖಾಸಗಿ ಬಸ್ ಮಾಲೀಕರು ಸರ್ಕಾರ ಅನುಮತಿ ನೀಡಿದ್ರೂ ಬಸ್‌ಗಳನ್ನು ರಸ್ತೆಗಳಿಸಲು ಹಿಂದೇಟು ಹಾಕುತ್ತಿದ್ದಾರೆ.
ಕೊರೊನಾ ಲಾಕ್‌ಡೌನ್ ನಿಂದಾಗಿ ಖಾಸಗಿ ಬಸ್ ವಲಯ ಸಾಕಷ್ಟು ನಷ್ಟ ಅನುಭವಿಸಿದೆ. ಬಸ್ ಮಾಲೀಕರಲ್ಲದೆ, ಚಾಲಕರು, ಬಸ್ ನಿಲ್ದಾಣದ ಏಜೆಂಟ್, ಲೈನ್ ಏಜೆಂಟ್ ಹಾಗೂ ಇತರರು ಖಾಸಗಿ ಸಾರಿಗೆ ಸೇವೆ ಮೇಲೆ ಅವಲಂಬಿತರಾಗಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿರ್ಬಂಧದಿಂದಾಗಿ ಏಕಾಏಕಿ ಬಸ್‌ಗಳು ಸೇವೆ ನೀಡುತ್ತಿದ್ದ ಸ್ಥಳಗಳಲ್ಲೇ ನಿಲ್ಲಿಸಲಾಗಿತ್ತು. ಪರವಾನಿಗೆ ತಮ್ಮ ಬಳಿಯೇ ಉಳಿಸಿಕೊಂಡರೆ ಅದಕ್ಕೆ ರಸ್ತೆ ತೆರಿಗೆ ಕಟ್ಟಬೇಕಾಗುತ್ತದೆ ಎಂದು ಆಯಾ ಜಿಲ್ಲೆಯ ಆರ್‌ಟಿಒಗೆ ಬಸ್ ಮಾಲೀಕರು ಪರವಾನಿಗೆಯನ್ನು ವಾಪಸ್ ನೀಡಿದ್ದಾರೆ. ಮತ್ತಷ್ಟು ನಷ್ಟದ ಭಯದಿಂದ ಬಸ್‌ಗಳನ್ನು ರಸ್ತೆಗೆ ಇಳಿಸುತ್ತಿಲ್ಲ. ಇದು ಖಾಸಗಿ ಬಸ್‌ಗಳನ್ನೇ ನಂಬಿಕೊಂಡಿದ್ದವರ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ...
ಜೂನ್ 8 ರಿಂದ ಖಾಸಗಿ ಬಸ್ ಸೇವೆಗೆ ಸರ್ಕಾರ ಅವಕಾಶ ನೀಡಿದೆಯಾದರೂ ಬಸ್ ಮಾಲೀಕರು ಮಾತ್ರ ಬಸ್‌ಗಳನ್ನು ರಸ್ತೆಗಿಳಿಸುವ ನಿರ್ಧಾರ ಮಾಡಿಲ್ಲ. ಕಾರಣ 8 ದಿನಗಳ ತೆರಿಗೆ ಕೂಡ ಪಾವತಿ ಮಾಡಬೇಕಿರುವುದು. ಕೆಲವರು ಜುಲೈ 1 ರಿಂದ ಬಸ್ ಸೇವೆ ಆರಂಭಕ್ಕೆ ನಿರ್ಧಾರಿಸಿದ್ದಾರೆ. ಸದ್ಯ ಶಿವಮೊಗ್ಗ ಜಿಲ್ಲೆಯಲ್ಲಿ ಮಂಗಳೂರು - ಉಡುಪಿ ಜಿಲ್ಲೆಯ ಬಸ್‌ಗಳು ಶಿವಮೊಗ್ಗಕ್ಕೆ ಆಗಮಿಸುತ್ತಿವೆ. ಇದನ್ನು ಹೊರತು ಪಡಿಸಿ ಬೇರೆ ಯಾವ ಜಿಲ್ಲೆಯ ಬಸ್‌ಗಳು ಸಂಚಾರ ಆರಂಭಿಸಿಲ್ಲ.
ಬಸ್ ಸೇವೆ ಆರಂಭಿಸಬೇಕಾದರೆ ಮೊದಲು ಅವುಗಳನ್ನು ರಿಪೇರಿ ಮಾಡಿಸಿ ಓಡಿಸಬೇಕಿದೆ. ಅಲ್ಲದೆ, ಬಸ್‌ಗಳ ಬಣ್ಣ ಸಹ ಮಾಸಿದೆ. ಇದರಿಂದ ಬಸ್‌ಗಳನ್ನು ಕಂಡಿಷನ್ ಮಾಡಿಸಿಯೇ ರಸ್ತೆಗಳಿಸಬೇಕು. ಅಲ್ಲದೆ ಸರ್ಕಾರದ ಕೊರೊನಾ ನಿಯಮದಿಂದ ಬಸ್ ಓಡಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ. ಬಸ್‌ನಲ್ಲಿ ಕೇವಲ 30 ಪ್ರಯಾಣಿಕರಿಗೆ ಅವಕಾಶ ನೀಡಿದೆ. ಇದರಿಂದ ಬಸ್ ಓಡಿಸುವುದು ನಮಗೆ ನಷ್ಟವಾಗುತ್ತದೆ ಎನ್ನುತ್ತಾರೆ ಬಸ್ ಮಾಲೀಕರಾದ ರಂಗಪ್ಪ
ಖಾಸಗಿ ಬಸ್ ಚಾಲಕರು, ಕ್ಲೀನರ್ ಹಾಗೂ ಏಜೆಂಟ್‌ಗಳು ಲಾಕ್‌ಡೌನ್‌ನಲ್ಲಿ ಸಾಕಷ್ಟು ಕಷ್ಟದ ದಿನಗಳನ್ನು ಎದುರಿಸಿದ್ದಾರೆ. ಒಪ್ಪೊತ್ತಿನ ಊಟಕ್ಕೂ ಪರದಾಡಿದ್ದಾರೆ. ಕೆಲ ಬಸ್ ಮಾಲೀಕರು ತಮ್ಮ ಕೈಲಾದ ಹಣ ಮತ್ತು ದಿನಸಿ ಕಿಟ್‌ಗಳನ್ನು ನೀಡಿ ಸದ್ಯದ ಮಟ್ಟಿಗೆ ನೆರವಾಗಿದ್ದಾರೆ. ಒಟ್ಟಿನಲ್ಲಿ ಈ ಎಲ್ಲಾ ಸಮಸ್ಯೆಗಳಿಗೆ ಮುಂದಿನ ದಿನಗಳಲ್ಲಿ ಹೇಗೆ ಪರಿಹಾರ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.