ಶಿವಮೊಗ್ಗ: ಮಂಗನ ಕಾಯಿಲೆ ಎಂದಾಕ್ಷಣ ಮಲೆನಾಡಿನ ಜನರು ಬೆಚ್ಚಿ ಬೀಳುತ್ತಾರೆ. ಕಳೆದ ಐದಾರು ದಶಕಗಳಿಂದ ಮಂಗನ ಕಾಯಿಲೆ ಮಲೆನಾಡಿಗರನ್ನ (ಕೆಎಫ್ಡಿ) ಬಿಡದೇ ಕಾಡುತ್ತಿದೆ. ಪ್ರತಿ ವರ್ಷ ಅಕ್ಟೋಬರ್ ತಿಂಗಳಲ್ಲಿ ಮಲೆನಾಡಿನ ಜನರು ಮನೆಯಿಂದ ಹೊರ ಹೋಗಲು ಭಯ ಪಡುವಂತಹ ಸ್ಥಿತಿ ಎದುರಾಗಿದೆ. ಈ ಮಂಗನ ಕಾಯಿಲೆ ಮೇಲೆ ಇದೀಗ ನಿರಂತರ ಸಂಶೋಧನೆಗಳು ಆರಂಭಗೊಂಡಿವೆ.
ಇದರ ಮೊದಲ ಭಾಗವಾಗಿ ಕೆಎಫ್ಡಿ ಸಂಬಂಧಿತ ಸಮಗ್ರ ಮ್ಯಾನುವಲ್ ಸಿದ್ಧಪಡಿಸಿ, ಇತ್ತೀಚಿಗಷ್ಟೇ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಮಂಗನ ಕಾಯಿಲೆ ಎಂದರೆ ಏನು, ಅದು ಹೇಗೆ ಹರಡುತ್ತದೆ ಎಂಬುದರ ಬಗ್ಗೆ ಅದರ ಸರ್ವೇಕ್ಷಣಾ ಕಾರ್ಯ ಕುರಿತ ಸಮಗ್ರ ಮಾಹಿತಿ ಇದೆ. ಈವರೆಗೆ 2001-02ನೇ ಸಾಲಿನ ಕೆಎಫ್ಡಿ ಮ್ಯಾನುವಲ್ಅನ್ನೇ ಬಳಸಲಾಗುತ್ತಿದ್ದು, ಇದೀಗ ಹೊಸ ಮ್ಯಾನುವಲ್ ಬಿಡುಗಡೆ ಮಾಡಲಾಗಿದೆ.
ಇದುವರೆಗೆ ಮಂಗನ ಕಾಯಿಲೆ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯದೇ ಇದ್ದಿದ್ದರಿಂದಾಗಿ ಸೂಕ್ತ ಔಷಧ ಕಂಡು ಹಿಡಿಯಲು ಸಾಧ್ಯವಾಗಿರಲಿಲ್ಲ. ಆದರೆ ಈ ವರ್ಷ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆ ಕೆಎಫ್ಡಿ ಬಗ್ಗೆ ಸಂಶೋಧನೆ ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಪ್ರಸ್ತುತ ಐಸಿಎಂಆರ್ ಅನುಮತಿಗಾಗಿ ಕಾಯಲಾಗುತ್ತಿದ್ದು, ಅದು ದೊರೆತ ತಕ್ಷಣ ವೈರಸ್ ಮಟ್ಟದಲ್ಲಿ ಮತ್ತಷ್ಟು ಸಂಶೋಧನೆಗಳು ಚುರುಕುಗೊಳ್ಳಲಿವೆ. ಈ ನಡುವೆ ಮಂಗನ ಕಾಯಿಲೆಗೆ ವ್ಯಾಕ್ಸಿನೇಶನ್, ಉಗುಣಗಳನ್ನ ಸಾಯಿಸುವ ಹಾಗೂ ಓಡಿಸುವ ಸಂಬಂಧ ನಿರಂತರ ಸಂಶೋಧನೆ ನಡೆಸಲಾಗುತ್ತಿದೆ.