ಶಿವಮೊಗ್ಗ : ರಾಜ್ಯ ಸರ್ಕಾರದ ಮಂತ್ರಿಗಳು ಕೊರೊನಾ ತಡೆಯುವ ನೆಪದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್ ಎಸ್ ಸುಂದರೇಶ್ ಆರೋಪಿಸಿದ್ದಾರೆ.
ಆನ್ಲೈನ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ತಡೆಯುವ ನೆಪದಲ್ಲಿ ರಾಜ್ಯ ಸರ್ಕಾರದ ಮಂತ್ರಿಗಳು ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಬೆಡ್ಗಳ ಬಾಡಿಗೆ, ವೆಂಟಿಲೇಟರ್ಗಳನ್ನು ಖರೀದಿಸುವಲ್ಲಿ 25 ಕೋಟಿ ರೂ. ಲೂಟಿ ಮಾಡಿದ್ದಾರೆ. ಮುಖ್ಯಮಂತ್ರಿಗಳೇ ಇವುಗಳನ್ನು ಬಾಡಿಗೆ ತರದಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರೂ ಸಚಿವರುಗಳ ಭ್ರಷ್ಟಾಚಾರ ನಿಂತಿಲ್ಲ. ಸಿಎಂ ಯಾರನ್ನೂ ಕಂಟ್ರೋಲ್ ಮಾಡದ ದುರ್ಬಲ ಮುಖ್ಯಮಂತ್ರಿಗಳಾಗಿದ್ದಾರೆ. ಸಚಿವರುಗಳು ಮಾನವೀಯತೆ ಮರೆತು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಮುಖ್ಯಮಂತ್ರಿಗಳೇ ಆದೇಶ ಪಾಲಿಸುವಂತೆ ಬೇಡಿಕೊಳ್ಳುವಂತಾಗಿದೆ ಎಂದರು.
ಇನ್ನು, ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ತೆಗೆದುಕೊಂಡಿರುವ ಅಗತ್ಯ ಕ್ರಮಗಳ ಕುರಿತು ಜನಸಾಮಾನ್ಯರಿಗೆ ಮಾಹಿತಿ ನೀಡಬೇಕು. ಜನರು ಕೊರೊನಾ ಸೋಂಕು ದೃಢಪಟ್ಟ ಸಂದರ್ಭದಲ್ಲಿ ಎಲ್ಲಿಗೆ ಹೋಗಬೇಕು?, ಯಾವ ರೀತಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂಬುದರ ಮಾಹಿತಿ ಯಾರಿಗೂ ತಿಳಿಯದಾಗಿದೆ. ಕೇವಲ ಲಾಕ್‌ಡೌನ್ ವಿಚಾರದ ಬಗ್ಗೆಯೇ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಸಭೆ ನಡೆಸುತ್ತಿದ್ದಾರೆ ಹೊರತು, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಜಿಲ್ಲಾಡಳಿತ ಕೊರೊನಾ ಸೋಂಕಿತರು ಎಲ್ಲಿಗೆ ಹೋಗಬೇಕೆಂಬುದರ ಬಗ್ಗೆ ನಿರ್ದಿಷ್ಟ ಮಾಹಿತಿ ನೀಡಬೇಕೆಂದು ಒತ್ತಾಯಿಸಿದರು.
ಬೆಂಗಳೂರು ಸೇರಿ ಬೇರೆ-ಬೇರೆ ಜಿಲ್ಲೆಗಳಿಂದ ಜನರು ಶಿವಮೊಗ್ಗ ಜಿಲ್ಲೆಗೆ ಬರುತ್ತಿದ್ದಾರೆ. ಇದರಿಂದ ಹಳ್ಳಿ-ಹಳ್ಳಿಗೆ ಸೋಂಕು ಹರಡುವ ಆತಂಕವನ್ನು ಎದುರಾಗುತ್ತಿದೆ. ಇದನ್ನು ತಡೆಯಲು ಹೊರಗಿನಿಂದ ಬಂದವರ ಸಂಪೂರ್ಣ ಮಾಹಿತಿ ಪಡೆಯಬೇಕು. ಅವರನ್ನು ಕೂಡಲೇ ಸಂಪರ್ಕಿಸಲು ಅವರ ಫೋನ್ ನಂಬರ್‌ಗಳ ಮಾಹಿತಿ ಸಂಗ್ರಹಿಸಬೇಕು. ಅಲ್ಲದೆ, ಲಾಕ್ಡೌನ್ಗಿಂತ ಮೊದಲು ಅಗತ್ಯವಾದ ಬೆಡ್, ವೆಂಟಿಲೇಟರ್, ಸ್ಯಾನಿಟೈಸರ್ ಹಾಗೂ ಜಿಲ್ಲೆಗೆ 25 ಆ್ಯಂಬ್ಯುಲೆನ್ಸ್ ವಾಹನಗಳ ವ್ಯವಸ್ಥೆ ಮಾಡಬೇಕಾಗಿದೆ ಎಂದರು.