ಚಿಕ್ಕಮಗಳೂರು/ಶಿವಮೊಗ್ಗ: ಅಮರನಾಥ ಯಾತ್ರೆಗೆ ತೆರಳಿದ್ದ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಎಲ್ಲ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ. ಶಿವಮೊಗ್ಗದಿಂದ 16 ಹಾಗೂ ಚಿಕ್ಕಮಗಳೂರಿನಿಂದ 60 ಜನರು ಅಮರನಾಥ ಯಾತ್ರೆಗೆ ತೆರಳಿದ್ದು, ಎಲ್ಲರೂ ಸೇಪ್ ಆಗಿದ್ದಾರೆ.
ಚಿಕ್ಕಮಗಳೂರಿನ 60 ಜನರಲ್ಲಿ ಇಬ್ಬರು ಸುರಕ್ಷಿತವಾಗಿ ಜಮ್ಮುಗೆ ವಾಪಸ್ ಆಗಿದ್ದು, 58 ಜನ ಬಲ್ಸಾಲ್ ಬಂಕರ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಯಾತ್ರೆ ಮಾಡುವ ಸಮಯದಲ್ಲೇ ಮೇಘಸ್ಫೋಟ ಸಂಭವಿಸಿದ್ದು, ಸೇನಾ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಇವರ ಜೊತೆ ಜಿಲ್ಲಾಡಳಿತ ಸಂಪರ್ಕದಲ್ಲಿದ್ದು, ಅವರ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದೆ.
ಅಮರನಾಥನ ದರ್ಶನವಿಲ್ಲದೆ ವಾಪಸ್: ಶಿವಮೊಗ್ಗದಿಂದ ಮಾಜಿ ಉಪ ಮೇಯರ್, ಹಾಲಿ ಪಾಲಿಕೆ ಸದಸ್ಯರಾದ ಸುರೇಖಾ ಮುರುಳೀಧರ ನೇತೃತ್ವದಲ್ಲಿ 16 ಜನರು ಅಮರನಾಥ ಯಾತ್ರೆಗೆ ಹೋಗಿದ್ದರು. ಇವರೆಲ್ಲರೂ ಮ್ಯಾಂಗೊಲಿನ್ಸ್ ಏಜೆನ್ಸಿಯಿಂದ ಹೋಗಿದ್ದರು. ಅಮರನಾಥ ಯಾತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲಿ ಮೇಘಸ್ಫೋಟ ಉಂಟಾಗಿದೆ. ಇದರಿಂದ ಸದ್ಯ ಯಾತ್ರಾರ್ಥಿಗಳು ಅಮರನಾಥನ ದರ್ಶನ ಭಾಗ್ಯ ಲಭ್ಯವಾಗಿಲ್ಲ.
ಇನ್ನೂ ಮೇಘಸ್ಫೋಟವಾದಾಗ ಶಿವಮೊಗ್ಗದ ಯಾತ್ರಾರ್ಥಿಗಳು ಇನ್ನೂ ಬೇಸ್ ಕ್ಯಾಂಪ್ ಪೆಹಲ್ ಗಾವ್ನಲ್ಲಿದ್ದರು. ಇದರಿಂದ ಇವರಿಗೆ ಯಾವುದೇ ಅಪಾಯವಾಗಿಲ್ಲ. ಸದ್ಯ ಶಿವಮೊಗ್ಗದ ಎಲ್ಲಾ 16 ಜನ ಶ್ರೀನಗರಕ್ಕೆ ವಾಪಸ್ ಆಗಿದ್ದಾರೆ. ಇವರೆಲ್ಲಾ ಮೊದಲೇ ನಿಗದಿ ಪಡಿಸಿದಂತೆ ಸೋಮವಾರ ವಿಮಾನದ ಟಿಕೆಟ್ ಬುಕ್ ಆಗಿರುವ ಕಾರಣ ಸೋಮವಾರ ವಾಪಸ್ ಆಗಲಿದ್ದಾರೆ. ಇನ್ನೂ ದೇವರ ದರ್ಶನ ನಮಗೆ ಈ ವರ್ಷ ಕಷ್ಟವಾಗಿದೆ. ಮುಂದಿನ ಭಾರಿ ಇದೇ ವೇಳೆ ಅಮರನಾಥನ ದರ್ಶನಕ್ಕೆ ಇದೇ ಗೆಳತಿಯರ ಜೊತೆ ಬರುತ್ತೇವೆ ಎಂದು ಸುರೇಖಾ ಮುರುಳೀಧರ್ ತಮ್ಮ ವಿಡಿಯೋದಲ್ಲಿ ತಿಳಿಸಿದ್ದಾರೆ.
(ಇದನ್ನೂ ಓದಿ: ಅಮರನಾಥದ ದೇಗುಲದ ಬಳಿ ಮೇಘಸ್ಫೋಟ: 15 ಕ್ಕೆ ಹೆಚ್ಚಿದ ಸಾವಿನ ಸಂಖ್ಯೆ, 40ಕ್ಕೂ ಹೆಚ್ಚು ಯಾತ್ರಿಕರು ನಾಪತ್ತೆ)