ಶಿವಮೊಗ್ಗ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಸಿ.ಎಸ್.ಷಡಾಕ್ಷರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿನ್ನೆ ನಡೆದ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷ ಹುದ್ದೆಗೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಷಡಾಕ್ಷರಿ ಅವಿರೋಧವಾಗಿ ಆಯ್ಕೆಯಾದರು. ಕಳೆದ ಬಾರಿ ಅತ್ಯಧಿಕ ಮತಗಳಿಂದ ಆಯ್ಕೆಯಾಗಿದ್ದ ಇವರು, ಈ ಬಾರಿಯ ನಿರ್ದೇಶಕರ ಚುನಾವಣೆಯಲ್ಲೂ ತಮ್ಮ ಬಣದ ಹೆಚ್ಚು ನಿರ್ದೇಶಕರು ಆಯ್ಕೆಯಾಗುವಂತೆ ನೋಡಿಕೊಂಡಿದ್ದರು.
ಈ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ಅವರು, ತಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಿದ ಸರ್ಕಾರಿ ನೌಕರರ ಸಂಘದ ನಿರ್ದೇಶಕರಿಗೆ, ಸರ್ಕಾರಿ ನೌಕರರಿಗೆ ಧನ್ಯವಾದ ತಿಳಿಸಿದರು. ತಮ್ಮ ಮೇಲೆ ವಿಶ್ವಾಸವಿಟ್ಟು ಎರಡನೇ ಅವಧಿಗೆ ಆಯ್ಕೆ ಮಾಡಿದ್ದಾರೆ. ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರ ಶ್ರೇಯೋಭಿವೃದ್ಧಿಗೆ ಸಹಕರಿಸುವುದಾಗಿ ತಿಳಿಸಿದರು.
ಅದೇ ರೀತಿ ಈ ಬಾರಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವ ಬಯಕೆಯನ್ನು ಇದೇ ವೇಳೆ ವ್ಯಕ್ತಪಡಿಸಿದರು. ಕಳೆದ ಅವಧಿಯಲ್ಲಿ ರಾಜ್ಯ ಸಂಘದ ಖಜಾಂಚಿಯಾಗಿ ಸೇವೆ ಸಲ್ಲಿಸಿದ ಅನುಭವವಿದೆ. ಅಲ್ಲದೆ, ಇತರೆ ಜಿಲ್ಲೆಯವರು ಸಹ ನನ್ನ ಹೆಸರನ್ನು ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಸೂಚಿಸಿರುವುದರಿಂದ ನಾನು ಸಹ ರಾಜ್ಯಾಧ್ಯಕ್ಷ ಸ್ಥಾನ ಚುನಾವಣೆಗೆ ಸ್ಪರ್ಧೆ ಮಾಡಲು ನಿರ್ಧಾರ ಮಾಡಿದ್ದಾನೆ ಎಂದು ತಿಳಿಸಿದರು.