ಶಿವಮೊಗ್ಗ: ಕುಮುದ್ವತಿ ನದಿಯಲ್ಲಿ ಕೊಚ್ಚಿ ಹೋಗಿದ್ದ ವೃದ್ಧೆೆಯ ಶವ ಇಂದು ಪತ್ತೆಯಾಗಿದೆ. ಶನಿವಾರ ಚೋರಡಿಯ ನಿವಾಸಿ ನಾಗರತ್ನಮ್ಮ(60) ಎಂಬುವರು ನದಿಯಲ್ಲಿ ಕೊಚ್ಚಿ ಹೋಗಿದ್ದರು. ಕುಮುದ್ವತಿ ನದಿ ಪಕ್ಕದ ಚೌಡೇಶ್ವರಿ ದೇವಾಲಯಕ್ಕೆಂದು ಬಂದಿದ್ದ ಇವರು ನದಿ ಸೇತುವೆಯ ಮೇಲೆ ಹಣ್ಣು-ಕಾಯಿ ಹಾಗೂ ಶಾಲು ಇಟ್ಟು ನಾಪತ್ತೆಯಾಗಿದ್ದರು.
ಶನಿವಾರದಿಂದ ಇವರಿಗಾಗಿ ಶೋಧ ನಡೆಸಲಾಗಿತ್ತು. ಇಂದು ಚೋರಡಿ ಗ್ರಾಮದಿಂದ 12 ಕಿ.ಮೀ ದೂರದ ತಿರಗೋಣಿ ಮಠದ ಬಳಿ ಶವ ಪತ್ತೆಯಾಗಿದೆ. ಶವವನ್ನು ಅಗ್ನಿಶಾಮಕ ದಳ ಸಿಬ್ಬಂದಿ ದಡಕ್ಕೆ ತಂದಿದ್ದಾರೆ.
ಆತ್ಮಹತ್ಯೆ ಶಂಕೆ: ಮೃತ ನಾಗರತ್ನಮ್ಮ ಅವರಿಗೆ ಇಬ್ಬರು ಗಂಡು ಮಕ್ಕಳು. ಅವರಲ್ಲಿ ಓರ್ವ ಮೃತ ಪಟ್ಟಿದ್ದು, ಇರುವ ಮಗ ನಿತ್ಯ ಕುಡಿದು ಬರುತ್ತಿದ್ದನಂತೆ. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ದೇವಾಲಯಕ್ಕೆ ಬಂದಿದ್ದ ವೃದ್ಧೆ ದಿಢೀರ್ ಕಾಣೆ: ಕುಮುದ್ವತಿ ನದಿಯಲ್ಲಿ ಕೊಚ್ಚಿ ಹೋಗಿರುವ ಶಂಕೆ