ಶಿವಮೊಗ್ಗ: ವಿಪರೀತ ಮಳೆಯಿಂದ ತೀರ್ಥಹಳ್ಳಿ ತಾಲೂಕಿನ ತೂದೂರು ಗ್ರಾಮದ ರೈತ ಶಂಕರಪ್ಪ ಮೃತ ಪಟ್ಟಿದ್ದರು. ಇದೇ ಕ್ಷೇತ್ರದ ಶಾಸಕರಾದ ಗೃಹ ಸಚಿವ ಆರಗ ಜ್ಞಾನೇಂದ್ರ ನಿನ್ನೆ ರಾತ್ರಿ ಮೃತರ ಮನೆಗೆ ಭೇಟಿ ನೀಡಿ, ಸರ್ಕಾರದ ವತಿಯಿಂದ 4 ಲಕ್ಷ ರೂ. ಪರಿಹಾರದ ಚೆಕ್ ನೀಡಿದರು. ತಹಶೀಲ್ದಾರ್ ಶ್ರೀಪಾದ್ ಹಾಗೂ ಕಂದಾಯ ಅಧಿಕಾರಿಗಳು ಸಚಿವರ ಜೊತೆಗಿದ್ದರು.
ಮಳೆಹಾನಿ ಪ್ರದೇಶಕ್ಕೆ ಭೇಟಿ: ಶಿವಮೊಗ್ಗ ನಗರದಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಗೃಹ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿನ್ನೆ ಬೆಳಗ್ಗೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದು, ಬಾಪೂಜಿ ನಗರ, ವಿನಾಯಕ ನಗರ ಹಾಗೂ ಆರ್.ಎಂ.ಎಲ್ ನಗರ ಸೇರಿದಂತೆ ಅನೇಕ ಕಡೆ ಭೇಟಿ ನೀಡಿದರು. ಶಾಸಕ ಕೆ.ಎಸ್.ಈಶ್ವರಪ್ಪ ಇದ್ದರು.
ರಾಜಕಾಲುವೆ ಸ್ವಚ್ಛಗೊಳಿಸಿದ್ದರಿಂದ ಈ ಬಾರಿ ಬಾಪೂಜಿ ನಗರ ಭಾಗದಲ್ಲಿ ಹೆಚ್ಚಿನ ಮಳೆ ಅನಾಹುತವಾಗಿಲ್ಲ. ಕೆಲವು ಕಡೆ ತುಂಗಾ ಕಾಲುವೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ ಎಂದು ಈಶ್ವರಪ್ಪ ಗೃಹ ಸಚಿವರಿಗೆ ಮಾಹಿತಿ ನೀಡಿದರು. ಮೇಯರ್ ಸುನೀತ ಅಣ್ಣಪ್ಪ, ಸೂಡಾ ಅಧ್ಯಕ್ಷ ನಾಗರಾಜ್, ಡಿಸಿ ಡಾ.ಸೆಲ್ವಮಣಿ ಉಪಸ್ಥಿತರಿದ್ದರು.
ಇದನ್ನೂ ಓದಿ: ರಾಜ್ಯಸಭೆ, ಪರಿಷತ್ ಟಿಕೆಟ್: ದೆಹಲಿಯಲ್ಲಿ ಬೀಡುಬಿಟ್ಟ ರಾಜ್ಯ ಕೈ ನಾಯಕರು