ಶಿವಮೊಗ್ಗ : ಇಲ್ಲಿನ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಪರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತೆರೆದ ವಾಹನದಲ್ಲಿ ರೋಡ್ ಶೋ ನಡೆಸುವ ಮೂಲಕ ಭರ್ಜರಿ ಪ್ರಚಾರ ನಡೆಸಿದರು.
ಲೋಕಸಭಾ ಚುನಾವಣೆಗೆ ಕೇವಲ ಮೂರು ದಿನ ಬಾಕಿ ಉಳಿದಿದ್ದು, ರಾಜ್ಯ ಮತ್ತು ರಾಷ್ಟ್ರೀಯ ನಾಯಕರಿಂದ ಭರ್ಜರಿ ಪ್ರಚಾರ ನಡೆಯಿತು. ನಾಳೆ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿದ್ದ ಕಾರಣ, ಇಂದು ಘಟಾನುಘಟಿ ನಾಯಕರು ಪ್ರಚಾರ ನಡೆಸುವ ಮೂಲಕ ಭದ್ರಾವತಿಯಲ್ಲಿ ಶಕ್ತಿ ಪ್ರದರ್ಶನ ಮಾಡಿದರು. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಏಳು ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಶಾಸಕರಿದ್ದು, ಭದ್ರಾವತಿಯಲ್ಲಿ ಮಾತ್ರ ಕಾಂಗ್ರೆಸ್ ಪಕ್ಷದ ಸಂಗಮೇಶ್ವರ ಶಾಸಕರಾಗಿದ್ದಾರೆ. ಹಾಗಾಗಿ ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನ ಭದ್ರಾವತಿ ಕ್ಷೇತ್ರದಿಂದ ಪಡೆಯುವ ನಿಟ್ಟಿನಲ್ಲಿ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಶಕ್ತಿ ಪ್ರದರ್ಶನ ತೋರಿಸಿತು.
ರೋಡ್ ಶೋನಲ್ಲಿ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ, ಮಾಜಿ ವಿಧಾನ ಪರಿಷತ್ ಸಭಾಪತಿ ಡಿ.ಎಸ್ ಶಂಕರ್ ಮೂರ್ತಿ, ಅಭ್ಯರ್ಥಿ ಬಿ.ವೈ ರಾಘವೇಂದ್ರ , ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಜಿಲ್ಲಾಧ್ಯಕ್ಷರಾದ ಎಸ್ ರುದ್ರೇಗೌಡ ಸಾಥ್ ನೀಡಿದರು.
ರೋಡ್ ಶೋದಲ್ಲಿ ಬಿ.ವೈ ರಾಘವೇಂದ್ರ ಸಹೋದರ ಬಿ.ವೈ ವಿಜೇಂದ್ರ ಕಾರ್ಯಕರ್ತರೊಂದಿಗೆ ಪಾದಯಾತ್ರೆ ಮಾಡುವ ಮೂಲಕ ಗಮನ ಸೆಳೆದರು. ಭದ್ರಾವತಿ ರಂಗಪ್ಪ ಸರ್ಕಲ್ ನಿಂದ ಪ್ರಾರಂಭವಾದ ಮೆರವಣಿಗೆ ಅಂಬೇಡ್ಕರ್ ವೃತ್ತದವರೆಗೂ ಸಾಗಿತು. ನಗರದ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆಯಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹೂ ಹಾಕುವ ಮೂಲಕ ಅಮಿತ್ ಶಾ ಹಾಗೂ ರಾಘವೇಂದ್ರ ಅವರಿಗೆ ಸ್ವಾಗತ ಕೋರಿದರು.