ಶಿವಮೊಗ್ಗ: ರಸ್ತೆ ಅಪಘಾತದಲ್ಲಿ ಕನ್ನಡ ಯುವ ನಟ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಸಾವನ್ನಪ್ಪಿದ್ದಾರೆ. ಸಂಚಾರಿ ವಿಜಯ್ ಅವರಿಗೂ ಶಿವಮೊಗ್ಗ ಜಿಲ್ಲೆಗೂ ಸಾಕಷ್ಟು ನಂಟಿತ್ತು. ಈ ಬಗ್ಗೆ ಅವರ ಗೆಳೆಯ ಶಂಕರ ಮಿತ್ರ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಓದಿ: ಸ್ನೇಹಿತನ ತೋಟದಲ್ಲಿ ವಿಜಯ್ ಅಂತ್ಯಸಂಸ್ಕಾರ: ಮುಗಿಲು ಮುಟ್ಟಿದ ಆಕ್ರಂದನ
ಸಂಚಾರಿ ವಿಜಯ್ ಅವರು ಶಿವಮೊಗ್ಗಕ್ಕೆ ಸಾಕಷ್ಟು ಸಲ ಭೇಟಿ ನೀಡಿದ್ದಾರೆ. ಪ್ರತಿ ಬಾರಿ ಬಂದಾಗ ರಂಗ ಕಲಾವಿದರನ್ನು ಭೇಟಿ ಮಾಡುತ್ತಿದ್ದರು, ಜೊತೆಗೆ ಡಯಾನ್ ಬುಕ್ ಹೌಸ್ಗೆ ಭೇಟಿ ನೀಡುತ್ತಿದ್ದರು. ಹಾಗೇ ಶಿವಮೊಗ್ಗ ನಗರದ ಹೊಟೇಲ್ ಮೀನಾಕ್ಷಿ ಭವನದ ಅವಲಕ್ಕಿ ಅಂದರೆ ಅವರಿಗೆ ಪಂಚಪ್ರಾಣ ಎಂದು ನೊಂದ ಮನಸ್ಸಿನಲ್ಲೇ ಹಳೆ ಘಟನೆಗಳನ್ನು ಮೆಲುಕು ಹಾಕಿದರು.
ಸಿಗಂದೂರು ದೇವಸ್ಥಾನ, ಕುಪ್ಪಳ್ಳಿಗೆ ಭೇಟಿ:
ಸಂಚಾರಿ ವಿಜಯ್ ಸಿಗಂದೂರು ದೇವಸ್ಥಾನಕ್ಕೆ, ನಟಿ ಶೃತಿ ಹರಿಹರನ್ ಹಾಗೂ ಗೆಳೆಯ ಶಂಕರ್ ಮಿತ್ರ ಅವರೊಂದಿಗೆ ಭೇಟಿ ನೀಡಿದ್ದರು. ಹಾಗೇ ರಾಷ್ಟ್ರ ಕವಿ ಕುವೆಂಪು ಅವರ ಮನೆ ಕುಪ್ಪಳಿಗೂ ಭೇಟಿ ನೀಡಿದ್ದರು. ಅಲ್ಲದೇ ಸಾಗರ, ತೀರ್ಥಹಳ್ಳಿ, ಗಾಜನೂರು ಸೇರಿದಂತೆ ಹಲವಾರು ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಜನರೊಂದಿಗೆ ಬೆರೆಯುತ್ತಿದ್ದರು.
ಭದ್ರಾವತಿಯಲ್ಲಿ ಮೊದಲ ಸನ್ಮಾನ:
ರಾಷ್ಟ್ರ ಪ್ರಶಸ್ತಿ ಬಂದ ನಂತರ ಮೊದಲು ಸನ್ಮಾನ ಮಾಡಿದ್ದೇ ಭದ್ರಾವತಿಯಲ್ಲಿ. 'ನಾನು ಅವನಲ್ಲಾ ಅವಳು' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದ ನಂತರ ಮೊದಲು ಗುರುತಿಸಿ ಭದ್ರಾವತಿಯಲ್ಲಿ ಸನ್ಮಾನ ಮಾಡಲಾಯಿತು.
ಕುವೆಂಪು ವಿವಿಗೆ ಮುಖ್ಯ ಅತಿಥಿಯಾಗಿ ಆಗಮನ:
ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆಯುವ ಸಹ್ಯಾದ್ರಿ ಉತ್ಸವದ ಉದ್ಘಾಟಕರಾಗಿ ಭಾಗವಹಿಸಿದ್ದರು. ಹಾಗೆಯೇ ಶಿವಮೊಗ್ಗ ಜಿಲ್ಲೆಯ ಸಾಗರ ನಗರ ಸಭೆ ಸ್ವಚ್ಚತಾ ಅಭಿಯಾನ ಕಾರ್ಯಕ್ರಮದ ರಾಯಭಾರಿಯಾಗಿ 2016 ರಲ್ಲಿ ಭಾಗಿಯಾಗಿದ್ದರು.
ಸಂಚಾರಿ ವಿಜಯ್ ಎಲ್ಲೂ ಹೋಗಿಲ್ಲ, ಅವರು ಎಂದಿಗೂ ನಮ್ಮ ಜೊತೆಯಲ್ಲೇ ಇರುತ್ತಾರೆ. ಅಪಘಾತ ಆಗುವ ಎರಡು ದಿನ ಮುಂಚೆ ಕರೆ ಮಾಡಿದ್ದರು ಎಂದು ತಮ್ಮ ಗೆಳೆತನದ ಬಗ್ಗೆ ಈಟಿವಿ ಭಾರತದ ಜೊತೆ ಸ್ನೇಹಿತ ಶಂಕರ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.