ಶಿವಮೊಗ್ಗ: ಮೂವರು ಕೊರೊನಾ ಸೋಂಕಿತರು ಗುಣಮುಖರಾದ ಹಿನ್ನೆಲೆ ಕೋವಿಡ್ ಆಸ್ಪತ್ರೆ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟರು.
ಜಿಲ್ಲೆಯಲ್ಲಿ ಮೇ 8ರಂದು ಗುಜರಾತ್ನಿಂದ ಬಂದಿದ್ದ 9 ಜನ ತಬ್ಲಿಘಿಗಳಲ್ಲಿ 8 ಜನಕ್ಕೆ ಕೊರೊನಾ ತಗುಲಿತ್ತು. ಇದರಲ್ಲಿ ಈಗಾಗಲೇ 4 ಜನ ಮೇ 25ರಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು. ಇಂದು ಮೆಗ್ಗಾನ್ ಆಸ್ಪತ್ರೆಯಿಂದ ಮೂವರು ಬಿಡುಗಡೆ ಹೊಂದಿದ್ದಾರೆ. ಇದರಲ್ಲಿ ಓರ್ವ ತೀರ್ಥಹಳ್ಳಿ ತಾಲೂಕಿನವರು, ಉಳಿದ ಇಬ್ಬರು ಶಿಕಾರಿಪುರ ತಾಲೂಕಿನವರು( P-811, P-812 ಮತ್ತು P-814).
ಕೋವಿಡ್ ಪರೀಕ್ಷೆ ನಡೆಸಿದಾಗ ನೆಗೆಟಿವ್ ಬಂದ ಕಾರಣ ಇವರನ್ನು ಮನೆಗೆ ಕಳುಹಿಸಲಾಗುತ್ತಿದೆ. ಅದೇ ರೀತಿ ಆಸ್ಪತ್ರೆಯಿಂದ ಬಿಡುಗಡೆಯಾದವರು ಮತ್ತೆ 14 ದಿನ ಹೋಂ ಕ್ವಾರಂಟೈನ್ನಲ್ಲಿ ಇರಬೇಕು. ಇವರನ್ನು ಸ್ಥಳೀಯ ಆಶಾ ಕಾರ್ಯಕರ್ತೆಯರು ಮನೆಗೆ ಭೇಟಿ ನೀಡಿ ಪರಿಶೀಲಿಸುತ್ತಿರುತ್ತಾರೆ. ಜಿಲ್ಲೆಯಲ್ಲಿ 34 ಪಾಸಿಟಿವ್ ಕೇಸ್ಗಳಲ್ಲಿ ಈಗ 7 ಜನ ಬಿಡುಗಡೆಯಾಗಿದ್ದಾರೆ. ಆಸ್ಪತ್ರೆಯಲ್ಲಿ 27 ಜನ ಇದ್ದಾರೆ ಎಂದು ಸಿಮ್ಸ್ ನಿರ್ದೇಶಕ ಡಾ. ಗುರುಪಾದಪ್ಪ ತಿಳಿಸಿದ್ದಾರೆ.
ಜಿ.ಪಂ ಸಿಇಒ ವೈಶಾಲಿ, ಸಿಮ್ಸ್ ನಿರ್ದೇಶಕ ಗುರುಪಾದಪ್ಪ, ಜಿಲ್ಲಾ ಸರ್ಜನ್ ರಘುನಂದನ್ ಸೇರಿದಂತೆ ಆಸ್ಪತ್ರೆಯ ನರ್ಸ್ಗಳು ಚಪ್ಪಾಳೆ ತಟ್ಟುವ ಮೂಲಕ ಆಸ್ಪತ್ರೆಯ ವಾಹನದಲ್ಲಿ ಕೊರೊನಾದಿಂದ ಗುಣಮುಖರಾದವರನ್ನು ಬೀಳ್ಕೂಟ್ಟರು.